ಆತ್ಮೀಯರೇ,
ಇವತ್ತು ಬೆಳ್ಳಂಬೆಳಿಗ್ಗೆ ಒಂದು ಕಥೆ ಓದಿದೆ ಮನಸ್ಸಿಗೆ ತುಂಬಾ ಇಷ್ಟವಾಗಿ ,ಇದನ್ನು ಬ್ಲಾಗ್ ನಲ್ಲಿ ಹಾಕಿ ಸಂರಕ್ಷಣೆ ಮಾಡಬೇಕಂತ ವಿಚಾರ ಮಾಡಿದೆ.ಮನಸು ತುಂಬಾ ವಿಚಿತ್ರ ನೋಡಿ , ಹಾಗೆ ಹೀಗೆ ಅಂತ ಇನ್ನಷ್ಟು ಕಥೆಗಳನ್ನು ಇದಕ್ಕೆ ಪೋಣಿಸುವ ಸಣ್ಣ ಪ್ರಯತ್ನ ಮಾಡಿದ್ದಿನಿ.ಇದಕ್ಕೆ ಎಂದೂ ನೋಡಿರದ ವಾಟ್ಸ್ ಅಪ್ ಗೆಳೆಯರ, ಕೆಲವು ದಿನಪತ್ರಿಕೆಗಳ ಕೃಪೆಯನ್ನು ನಾನು ಮರೆಯುವಂತಿಲ್ಲ.ನಿಮ್ಮ ಬಳಿ ಕಥೆಗಳಿದ್ದರೆ ನನ್ನ ಇಮೇಲ್ ವಿಳಾಸಕ್ಕೆ ಕಳಿಸಿಕೊಡಿ ಅಂತಷ್ಟೇ ವಿನಂತಿಸುತ್ತೇನೆ
ವಂದನೆಗಳೊಂದಿಗೆ
ನಿಮ್ಮ ಸೇವೆಯಲ್ಲಿ
Devusir
Cell : 9845690036
Email ; devusir@gmail.com
ನಿಮ್ಮಆಲೋಚನಾಶಕ್ತಿಯೇನಿಮ್ಮಸಂಪತ್ತು
(ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ)
ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?
ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್ ಖರೀದಿಸುತ್ತೇನೆ..
ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.
ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.
ಬೇರೆಯೊಬ್ಬ ಹೇಳಿದ - ನಾನು ಚಾಕೊಲೇಟ್ಗಳನ್ನು ಖರೀದಿಸುತ್ತೇನೆ.
...ಆದರೆ..
ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ?
ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!!
ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು?
ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!
ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದು..ಅವರತ್ರ ಹೇಳು... ನೀನು ನಿನಗಾಗಿ ಏನನ್ನೂ ಖರೀದಿಸಬೇಕಲ್ಲವೇ ಈ 100ರೂಪಾಯಿಯಲ್ಲಿ?
ಮಗು ನೀಡಿದ ಉತ್ತರದಿಂದ ಶಿಕ್ಷಕರ ಕಣ್ಣು ತುಂಬಿಬಂತು..
ಮಗು ಹೇಳಿತು - ನನ್ನ ತಂದೆ ಈಗ ಈ ಜಗತ್ತಿನಲ್ಲಿಲ್ಲ
ನನ್ನ ತಾಯಿಯೇ ನನಗೆ ಎಲ್ಲ.....ನನ್ನ ತಾಯಿ ಊರ ಜನರ ಬಟ್ಟೆ ಹೊಲಿದು...ಬರುವ ಸಂಪಾದನೆಯಿಂದ..ನನಗೆ ಊಟ.. ನನಗೆ ಬಟ್ಟೆ...ಶಾಲೆಗೆ ಹೋಗಲು ಪುಸ್ತಕ ..ಪೆನ್ನು...ಕೊಡಿಸುತ್ತಳೇ....ಕೆಲವು ತಿಂಗಳುಗಳಿಂದ ಅವಳು ದೃಷ್ಟಿ ಹೀನತೆಯಿಂದ ಬಟ್ಟೆಯನ್ನು ಸರಿಯಾಗಿ ಹೊಲಿಯಲು ಪರದಡುತ್ತ ಇದ್ದಾಳೆ, ಅದಕ್ಕಾಗಿಯೇ ನಾನು ನನ್ನ ತಾಯಿಗೆ ಕನ್ನಡಕವನ್ನು ನೀಡುತ್ತೇನೆ....ಯಾಕ್ ಅಂದ್ರೆ...ನನ್ ಕೊಡಿಸುವ ಕನ್ನಡಕ್ಕದಿಂದ.... ನನ್ನ ತಾಯಿ... ನನ್ನನು ಚೆನ್ನಾಗಿ ಓದಿಸುತ್ತಳೇ ಅನ್ನೋ ನಂಬಿಕೆಯಿಂದ...ಮತ್ತು...ನನ್ನ ತಾಯಿಯ.ಸಹಾಯದಿಂದ....ನಾನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿ ಆದ್ರೂ ಆಗಬಹುದು.
ಶಿಕ್ಷಕ -ಶಭಾಷ್ ಪುಟ್ಟ....ನಿನ್ನ ಆಲೋಚನೆಯೇ ನಿನ್ನ ಸಂಪಾದನೆ! ತಗೋ ಈ 100 ರೂ. ನನ್ನ ಕೊಟ್ಟ ಭರವಸೆಯ ಮಾತಿನಂತೆ ಮತ್ತು ನಾನು ಇನ್ನು ಈ 200 ರೂ.ಗಳನ್ನು ಸಾಲವಾಗಿ ನೀಡುತ್ತಿದ್ದೇನೆ. ನೀನು ದೊಡ್ಡ ವ್ಯಕಿಯಾಗಿ ಹಣ ಗಳಿಸಿದಾಗ ,ಆ 200ನ್ನು ಹಿಂತಿರುಗಿಸು....ನೀನು ಅಂತಹ ದೊಡ್ಡ ಮನುಷ್ಯನಾಗಬೇಕೆಂದು ನಾನು ಬಯಸುತ್ತೇನೆ...ಎನ್ನುತ್ತಾ....ಆ ವಿದ್ಯಾರ್ಥಿಯ ತಲೆಯ ಮೇಲೆ ಕೈಯನ್ನು ಇಟ್ಟು ಆಶೀರ್ವದಿಸಿಸುತ್ತ 300 ಕೊಟ್ಟರು.
30 ವರ್ಷಗಳ ನಂತರ...........
ಹೊರಗೆ ಮಳೆ ಬರುತ್ತಿದೆ, ಒಳಗೆ ತರಗತಿ ನಡೆಯುತ್ತಿದೆ!...ಅದೇ ಶಿಕ್ಷಕರು ಇನ್ನು ತನ್ನ ನಿವೃತ್ತಿಯ ಕಡೆಯ 3ತಿಂಗಳು ಎದುರುನೋಡುತ್ತ...ಯೋಚಿಸುತ್ತ...ಪಾಠ ಮಾಡುತ್ತಿದ್ದರು
ಏಕಾಏಕಿ ಶಾಲೆಯ ಮುಂದೆ ಜಿಲ್ಲಾಧಿಕಾರಿಗಳ ಕೆಂಪು ಬಣ್ಣದ ದೀಪಾದ ಸೈರನ್ ಬತ್ತಿಯ ವಾಹನ ಬಂದು ನಿಂತಿತ್ತು..... ಶಾಲಾ ಸಿಬ್ಬಂದಿ ಅಲರ್ಟ್ ಆದರು....
ಶಾಲೆಯಲ್ಲಿ ಮೌನ!
ಆದರೆ ಇದು ಏನು?
ಜಿಲ್ಲಾಧಿಕಾರಿಯೊಬ್ಬರು ಮುದುಕ ಶಿಕ್ಷಕರ ಕಾಲಿಗೆ ಬಿದ್ದು ಹೇಳುತ್ತಾರೆ - ಸಾರ್, ನಾನು ಸಾಲವಾಗಿ ಪಡೆದ 200 ರೂಪಾಯಿಯನ್ನು ಹಿಂದಿರುಗಿಸಲು ಬಂದಿದ್ದೇನೆ!
ಇಡೀ ಶಾಲೆಯ ಸಿಬ್ಬಂದಿ ಬೆಚ್ಚಿಬಿದ್ದರು!
ಆ ವಯಸ್ಸಾದ ಶಿಕ್ಷಕ...ಕಾಲಿಗೆ ಬೀಳಲು ಬಾಗುತ್ತಿರುವ ಆ ಯುವಕನ್ನು ಗುರುತಿಸಿ ಮೇಲೆ ಎತ್ತುತ್ತಾನೆ,ಅಪ್ಪಿಕೊಂಡು ತೋಳುಗಳಲ್ಲಿ ಅಳುತ್ತಾ ಹೇಳುತ್ತಾನೆ....ನನ್ನ ಶಿಕ್ಷಕ ವೃತ್ತಿ ಸಾರ್ಥಕವಾಯಿತು...✍️
ಕಾಲ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ..ಚಕ್ರವರ್ತಿಯ ಮಗ ಫಕೀರನಾಗುತ್ತಾನೆ, ಮತ್ತು ಫಕೀರನ ಮಗ ಚಕ್ರವರ್ತಿಯಾಗುತ್ತಾನೆ.....ಒಳ್ಳೆಯ ಗುರು...ಒಳ್ಳೆಯ ಗುರಿ ಇರಬೇಕು ಅಷ್ಟೇ.......
ನಾಡಿನ ಖ್ಯಾತ ಬರಹಗಾರ್ತಿ, ಮಾತೃಹೃದಯಿ, ಸಮಾಜ ಸೇವಕಿ ಸುಧಾಮೂರ್ತಿ ಅಮ್ಮ
ಸುಧಾ ಮೂರ್ತಿಯವರು ಹುಟ್ಟಿದ ದಿನ ಆಗಸ್ಟ್ 19. ಶಾಲೆಯ ದಿನಗಳಿಂದ ಉನ್ನತ ದರ್ಜೆಯಲ್ಲಿ ಶಿಕ್ಷಣ ಸಾಧನೆ ಮಾಡಿದ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಬೆಂಗಳೂರಿನ ‘ಇಂಡಿಯನ್ ಇನ್ಸ್ತಿಟ್ಯೂಟ್ ಆಫ್ ಸೈನ್ಸ್’ನಲ್ಲಿ ಕಂಪ್ಯೂಟರ್ ವಿಜ್ಞಾನದ ಅಧ್ಯಯನ ನಡೆಸಿ, ಟಾಟಾ ಉದ್ಯಮದಲ್ಲಿ ಪ್ರಥಮ ಮಹಿಳಾ ತಂತ್ರಜ್ಞರಾಗಿ ಕೆಲಸ ಮಾಡಿದವರು. ಅದೂ ಹೇಗೆ!
ಸೂಚನಾ ಫಲಕದಲ್ಲಿ ಟಾಟಾ ಸಂಸ್ಥೆ ಹುಡುಗರಿಗೆ ಮಾತ್ರ ಎಂದು ಬರೆದಿದ್ದ ವೃತ್ತಿ ಆಹ್ವಾನ ನೋಡಿ, ‘ಹುಡುಗಿಯರಿಗೆ ಏಕಿಲ್ಲ?’ ಅಂತ ಸುಧಾ ಅವರು ಟಾಟಾ ಮುಖ್ಯಸ್ಥರಿಗೆ ಅಂತ ವಿಳಾಸದಲ್ಲಿ ಬರೆದು ಒಂದು ಪೋಸ್ಟ್ ಕಾರ್ಡ್ ಹಾಕಿದರು. ಅದು ತಲುಪಿದ್ದು ಜೆ.ಆರ್.ಡಿ ಟಾಟಾ ಅವರ ಕೈಯಲ್ಲಿ. ಹಾಗಾಗಿ ಸುಧಾ ಮೂರ್ತಿ ಅವರಿಗೆ ಸಂದರ್ಶನಕ್ಕೆ ಆಹ್ವಾನ ಬಂತು. ಅಲ್ಲಿ ಸಂದರ್ಶನದಲ್ಲಿ ಕಾರ್ಖಾನೆಯ ವಾತಾವರಣದಲ್ಲಿ ಕೆಲಸ ಮಾಡುವುದು ಸ್ತ್ರೀಯರಿಗೆ ಯಾವ ರೀತಿಯಲ್ಲಿ ಕಷ್ಟ ಎಂದು ಸೌಜನ್ಯದಿಂದ ಟಾಟಾ ಸಂಸ್ಥೆಯ ಅಧಿಕಾರಿಗಳು ಸುಧಾ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅದು ಸರಿ ಎಂದ ಸುಧಾ ಮೂರ್ತಿ ಅವರು “ಹೇಗಾದರೂ ಸ್ತ್ರೀಯರಿಗೂ ಇಂತಹ ಬದುಕು ಒಂದು ದಿನ ಆರಂಭ ಆಗಲೇಬೇಕಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದಾಗ”, ಆ ಆರಂಭವನ್ನು ಸುಧಾ ಮೂರ್ತಿಅವರಿಂದಲೇ ಟಾಟಾ ಸಂಸ್ಥೆ ಪ್ರಾರಂಭಿಸುವ ದಿನ ಕೂಡಿಬಂತು.
ಹಲವಾರು ಬಾರಿ ಜೆ. ಆರ್. ಡಿ ಟಾಟಾ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದ್ದ ಸುಧಾ ಮೂರ್ತಿ ಒಂದು ದಿನ “ನಾನು, ನನ್ನ ಪತಿ ಬೆಂಗಳೂರಿನಲ್ಲಿ ನಮ್ಮದೇ ಆದ ಒಂದು ಸಂಸ್ಥೆ ಮಾಡುತ್ತಿದ್ದೇವೆ” ಎಂದಾಗ ಜೆ.ಆರ್.ಡಿ ಅವರು “ನೀವು ಖಂಡಿತ ಯಶಸ್ವಿಯಾಗುತ್ತೀರ, ಆಗ ನೀವು ದೇಶದ ಅಭಿವೃದ್ಧಿಗೂ ಕೆಲಸ ಮಾಡಿ” ಎಂದು ಹೇಳಿದರಂತೆ. ಮುಂದೆ ನಡೆದದ್ದು ಇತಿಹಾಸ. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಗಳು ಇಂದು ದೇಶಕ್ಕೆ ತಂದ ಹೊಸ ರೀತಿಯ ಅಭಿವೃದ್ಧಿಯ ಮುಖ, ಇಡೀ ಲೋಕವೇ ಬಲ್ಲ ವಿಷಯ.
ಇದು ಒಂದು ಮಾತಿನಲ್ಲಿ ಮೂಡುವ ಸಣ್ಣ ವಿಚಾರವಲ್ಲ. ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಹೆಣ್ಣಿನ ಸ್ಥಾನ ಬಹುಮುಖ್ಯವಾದದ್ದು. ಅಂದು ತಮ್ಮದೇ ಚಿಂತನೆಯಲ್ಲಿ ಏನನ್ನಾದರೂ ಮಾಡಬೇಕೆಂದು ಇಚ್ಚಿಸಿದ ನಾರಾಯಣ ಮೂರ್ತಿ ಅವರ ಕೈಯಲ್ಲಿ ಬಂದ ಬಂಡವಾಳ ಸುಧಾ ಮೂರ್ತಿ ಅವರ ಕೈಯಲ್ಲಿದ್ದ ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನದ ಬಳೆ. ಇಂದು ಆ ಬಳೆಗಳು ಎಷ್ಟೊಂದು ಜನರ ಭವಿಷ್ಯವನ್ನು, ದೇಶದ ಪ್ರತಿಷ್ಠೆಯನ್ನು ಮೆರೆಸಿವೆ ಎಂದು ಹೇಳುವುದು, ಈ ನಾಡು ಸುಧಾ ಮೂರ್ತಿ ಅವರ ಬಗೆಗೆ ಹೇಳುವ ಕೃತಜ್ಞತೆಯ ಮಾತಾಗುತ್ತದೆ.
ಇಂದು ಅದೆಷ್ಟೆಷ್ಟೋ ಊರುಗಳಲ್ಲಿನ ಗ್ರಂಥಾಲಯಗಳು, ಶಾಲೆಗಳಲ್ಲಿನ ಕಲಿಕೆಯ ವ್ಯವಸ್ಥೆಗಳು, ನೈಸರ್ಗಿಕ ಸ್ವಚ್ಚತೆಯ ಸೌಲಭ್ಯಗಳು ಹೀಗೆ ಹಲವನ್ನು ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ಮೂಲಕ ಸಂಚಲನಗೊಳ್ಳಲು ನೀಡಿರುವ ಕೊಡುಗೆ ಮಹೋನ್ನತವಾದದ್ದು. ಅವರು ಕೂಡಾ ಇನ್ಫೋಸಿಸ್ ಸಂಸ್ಥೆಯ ಒಂದು ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರು ಎಂಬುದು ಕೂಡಾ ನಮಗೆಲ್ಲಾ ತಿಳಿದ ವಿಚಾರವೇ ಆಗಿದೆ. ಆದರೂ ತನ್ನ ಸಂಗಾತಿಯ ಯಶಸ್ಸಿನಲ್ಲಿ ತಮ್ಮ ಯಶಸ್ಸನ್ನು ಕಂಡುದು ಮಾತ್ರವಲ್ಲದೆ, ಲೋಕವನ್ನು ತಮ್ಮ ಹೃದಯ ಸಂವೇದನೆಯಲ್ಲಿ ಕಂಡ ಮಾತೃ ಹೃದಯ ಕೂಡಾ ಸುಧಾ ಅವರದ್ದು.
ಸುಧಾ ಮೂರ್ತಿ ಅವರ ಅಂಕಣಗಳನ್ನು ಒಮ್ಮೊಮ್ಮೆ ಓದಿದಾಗಲೂ ಇದು, ನಾವು ಮಾರುಕಟ್ಟೆಯಲ್ಲಿ ಹೋದಾಗ, ಬಸ್ಸಿನಿಂದ ಇಳಿದಾಗ, ಆಟೋ ಹತ್ತಿದಾಗ, ಹೋಟೆಲಿನಲ್ಲಿ ತಿಂಡಿ ತಿಂದಾಗ, ಅವರಿವರು ಆಡಿದ ಮಾತಿನಂತೆಯೇ ಆತ್ಮೀಯವಾಗಿದೆಯೆಲ್ಲಾ ಎಂದು ಸನಿಹ ಬರುತ್ತಿರುವಂತೆಯೇ, ಯಾವುದೋ ಸತ್ಯತೆಯ ಅನುಭಾವ, ಹೃದಯಸ್ಪರ್ಶಿ ಸಂವೇದನೆಗಳ ಬಳಿ ನಮಗರಿವಿಲ್ಲದಂತೆ ಸುಧಾ ಮೂರ್ತಿಯವರು ನಮ್ಮನ್ನು ಕೈಹಿಡಿದು ನಡೆಸಿರುತ್ತಾರೆ. ಹೀಗಾಗಿ ಅವರ ಅಭಿಮಾನಿಗಳ ವ್ಯಾಪ್ತಿ ಅಬ್ದುಲ್ ಕಲಾಂ ಆಜಾದ್ ಅವರಿಂದ ಮೊದಲ್ಗೊಂಡು ಹಳ್ಳಿಯಲ್ಲಿ ಪತ್ರಿಕೆ ಹಿಡಿದು ಕುಳಿತ ರೈತನವರೆಗೆ ಎಲ್ಲರನ್ನೂ ಸಂವೇದಿಸುವಂತದ್ದಾಗಿದೆ. ಹೀಗಾಗಿ ಈ ‘ಸಾಫ್ಟ್ ಮನದ’ ಹೃದಯಸ್ಪರ್ಶಿ ಸೂಕ್ಷ್ಮತೆಗೆ ನಾವುಗಳು ನಿರಂತರ ಕಾಯುವಂತೆ ಮಾಡುತ್ತವೆ.
ಬರಹಗಾರರಾಗಿ ಸುಧಾ ಮೂರ್ತಿಯವರು ಬರೆದಿರುವ 'ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್', 'Wise and otherwise', 'ಡಾಲರ್ ಸೊಸೆ', 'ಮಹಾಶ್ವೇತಾ', 'Sweet Hospitality,' ಮೊದಲಾದ ಕೃತಿಗಳು 'ಕನ್ನಡ' ಹಾಗು 'ಇಂಗ್ಲಿಷ್'ನಲ್ಲಿ ಪ್ರಕಟವಾಗಿವೆ. 'ಸುಧಾಮೂರ್ತಿ'ಯವರು ಕೆಲವೊಂದು ಪ್ರವಾಸ ಕಥನಗಳನ್ನೂ ಬರೆದಿದ್ದಾರೆ.
ಸುಧಾಮೂರ್ತಿ ಅವರ ಬರವಣಿಗೆ, ಸಮಾಜಸೇವೆ ಮುಂತಾದ ಕಾರ್ಯಗಳಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದು ಅದು ಪದ್ಮಶ್ರೀ ಪ್ರಶಸ್ತಿಯವರೆಗೆ ವ್ಯಾಪ್ತಿ ಹೊಂದಿದೆ. ಇವೆಲ್ಲವನ್ನೂ ಮೀರಿದ್ದು ಅವರ ಸರಳತೆ. ದೂರದರ್ಶನದಲ್ಲಿ ಚಿತ್ರ ತಾರೆ ನಡೆಸುವ ಸಂದರ್ಶನವಿರಲಿ, ಮಜಾ ಟಾಕೀಸ್ ಭಾಗವಹಿಕೆ ಇರಲಿ, ದೂರದರ್ಶನದ ಧಾರಾವಾಹಿಯಲ್ಲಿ ಅಭಿನಯವಿರಲಿ, ದೇಶದ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿನ ಅಂಕಣಗಳಿರಲಿ, ಯಾವುದೇ ಸಮಾರಂಭದಲ್ಲಿ ಮಾತನಾಡುವಲ್ಲಿನ ಆವರಣವಿರಲಿ, ಯಾವೊಂದೂ ದಿನ ನಿತ್ಯದ ಚಟುವಟಿಕೆಗಳಿರಲಿ, ಎಲ್ಲೂ ಅದು ತನ್ನ ಸರಳ, ಸೌಜನ್ಯತೆ, ಮೂಡಿ ಬಂದ ಮೊಳಕೆಯ ಹಾದಿ ಇವ್ಯಾವುದರ ಸಂಪರ್ಕವನ್ನು ಕಿಂಚಿತ್ತೂ ಕಳೆದುಕೊಳ್ಳುವುದಿಲ್ಲ.
ಈ ಸಾಫ್ಟ್ ಮನದ ಸೌಜನ್ಯತೆಗೆ, ಸಮಾಜದ ಜೊತೆ ನಿರಂತರವಾಗಿರುವ ಸುಧಾ ಮೂರ್ತಿ ಎಂಬ ಅಕ್ಕರೆಯ ಸಂವೇದನೆಗೆ ನಮನಗಳು ಮತ್ತು ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ಇವರ ಮತ್ತು ಇವರ ಕುಟುಂಬದವರ ಬದುಕು ನಿತ್ಯ ಸಂತಸ, ಅಭಿವೃದ್ಧಿ ಮತ್ತು ಸುಂದರ ಸಂವೇದನೆಗಳಿಂದ ನಿರಂತರ ಶೋಭಿಸುತ್ತಿರಲಿ.
ತಿರುವಿನಲ್ಲಿ ನಿಂತ ಕಾರು ಮತ್ತು ಚಹಾ ಕೊಟ್ಟ ಗರ್ಭಿಣಿ
ಅದೊಂದು ಗುಡ್ಡ ಬೆಟ್ಟಗಳ ಪ್ರದೇಶ. ಕೆಲವೊಂದು ಪ್ರವಾಸಿಗರು ಬೆಟ್ಟದ ತುದಿಯ ಸೌಂದರ್ಯ ಸವಿಯಲು ಬರುತ್ತಿದ್ದರು. ಆವತ್ತು ಕತ್ತಲಾಗುತ್ತಿತ್ತು. ವಿಶ್ವನಾಥ್ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ.ಎದುರಿನ ಒಂದು ತಿರುವಿನಲ್ಲಿ ಒಂದು ಕಾರು ನಿಂತಿರುವುದು ಮಬ್ಬಾಗಿ ಕಾಣುತಿತ್ತು. ಹತ್ತಿರ ಬರುತ್ತಿದ್ದಂತೆಯೇ ಸ್ವಲ್ಪ ವಯಸ್ಸಾದ ಮಹಿಳೆ ಕಾರಿನ ಬಳಿ ಇರುವುದು ಕಂಡಿತು. ಆಕೆ ಮೆಲ್ಲಗೆ ಕೈ ಮಾಡುತ್ತಿದ್ದರು. ವಿಶ್ವನಾಥ ತನ್ನ ಸ್ಕೂಟರನ್ನು ಸೈಡಿಗೆ ಹಾಕಿ ಅಲ್ಲಿಗೆ ಹೋದ.
ಮಹಿಳೆ ಹೇಳಿದರು: ನನ್ನ ಕಾರಿನ ಟಯರ್ ಪಂಕ್ಚರ್ ಆಗಿದೆ. ಆಗದಿಂದ ಕಂಡವರಿಗೆಲ್ಲ ಮಾಡುತ್ತಿದ್ದೇನೆ. ಯಾರೂ ನಿಲ್ಲಿಸುತ್ತಿಲ್ಲ. ಟಯರ್ ಚೇಂಜ್ ಮಾಡುವ ಶಕ್ತಿ ನನಗಿಲ್ಲ.
ಆಗ ವಿಶ್ವನಾಥ ಹೇಳಿದ: ಇದು ಅಪರಿಚಿತ ಜಾಗ ಅಲ್ವಾ? ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಕಾರು ಹಾಳಾಗಿದೆ ಎಂದು ಕಣ್ಣೀರು ಹಾಕಿ ದರೋಡೆ ಮಾಡಿದ ಘಟನೆಯೂ ನಡೆದಿದೆ ಎಂದು ನೆನಪಿಸಿಕೊಂಡ.
`ನೀವು ಈ ಚಳಿಯಲ್ಲಿ ಯಾಕೆ ನಡುಗುತ್ತೀರಿ. ಕಾರಿನೊಳಗೆ ಬೆಚ್ಚಗೆ ಕುಳಿತುಕೊಳ್ಳಿ. ನಾನು ಟಯರ್ ಚೇಂಜ್ ಆದ ಮೇಲೆ ಕರೆಯುತ್ತೇನೆ' ಎಂದ ವಿಶ್ವನಾಥ. ಮಹಿಳೆ ಒಳಗೆ ಕುಳಿತರು. ಕೆಲವೇ ನಿಮಿಷದಲ್ಲಿ ಟಯರ್ ಚೇಂಜ್ ಆಯಿತು. ``ಇನ್ನು ಹೊರಡಬಹುದು ಮೇಡಂ' ಅಂದ.
ಮನುಷ್ಯನ ಸಹಾಯದಿಂದ ತುಂಬ ಖುಷಿಯಾದ ಈ ಶ್ರೀಮಂತ ಮಹಿಳೆ `ಎಷ್ಟು ಕೊಡಲಿ ಹೇಳು' ಎಂದು ಕೇಳಿದರು. ಒಂದೆರಡು ಗರಿಗರಿ ನೋಟು ಹಿಡಿದುಕೊಂಡಿದ್ದರು. ಆಗ ವಿಶ್ವನಾಥ `ಇದಕ್ಕೆಲ್ಲ ದುಡ್ಡೆಂತಕೆ ಮೇಡಂ. ಕಷ್ಟ ಕಾಲದಲ್ಲಿ ಸಹಾಯ ಮಾಡಲು ಸಿಗುವ ಅವಕಾಶವೇ ಭಾಗ್ಯ' ಎಂದು ಕೈಮುಗಿದ.
ಮಹಿಳೆ ಕೃತಜ್ಞತಾ ಭಾವದಿಂದ ಕೈಮುಗಿದು ಬೆಟ್ಟವಿಳಿಯಲು ಆರಂಭಿಸಿದರು.ಸ್ವಲ್ಪ ಇಳಿದ ಮೇಲೆ ಅಲ್ಲೊಂದು ಚಹಾ ಅಂಗಡಿ ಕಂಡಿತು. ಸಾಕಷ್ಟು ಹೊತ್ತು ಕಾದು ಸುಸ್ತಾಗಿದ್ದ ಅವರಿಗೆ ಚಹಾ ಕುಡಿಯೋಣ ಅನಿಸಿತು. ಅಲ್ಲಿ ಚಹಾ ಮಾಡುತ್ತಿದ್ದುದು ಒಬ್ಬ ತುಂಬು ಗರ್ಭಿಣಿ. ಈ ವೃದ್ಧೆಯನ್ನು ನೋಡುತ್ತಿದ್ದಂತೆಯೇ ಹತ್ತಿರ ಬಂದ ಆಕೆ ತಾನು ಹೊದ್ದಿದ್ದ ಟವಲ್‍ನಿಂದಲೇ ಒದ್ದೆಯಾದ ಮಹಿಳೆಯ ತಲೆಯನ್ನೂ ಒರಸಿದಳು. ``ತಲೆ ಒದ್ದೆ ಬಿಡಬೇಡಿ ಮೇಡಂ.. ಮೊದಲೇ ಹಿಮ ಬಿದ್ದಿದೆ. ಚಳಿ ಜೋರಾಗಿದೆ' ಎಂದಳು.
ಸ್ವಲ್ಪ ಹೊತ್ತಿನಲ್ಲಿ ಒಳಗಿನಿಂದ ಚಹಾ ಮತ್ತು ತಿಂಡಿ ತಂದಿಟ್ಟಳು. ಈ ಎಂಟನೇ ತಿಂಗಳಿನಲ್ಲೂ ಇಷ್ಟೊಂದು ಖುಷಿಯಾಗಿ ಕೆಲಸ ಮಾಡುತ್ತಾಳಲ್ಲಾ ಅನಿಸಿ ಹೆಮ್ಮೆ ಅನಿಸಿತು.ಚಹಾ ಕುಡಿದು ಮುಗಿಸಿದ ಮಹಿಳೆ 100 ರೂ. ನೋಟು ಕೈಗಿಟ್ಟರು. ಗರ್ಭಿಣಿ ಮಹಿಳೆ ಚಿಲ್ಲರೆ ತರಲೆಂದು ಒಳಗೆ ಹೋಗಿ ಚಿಲ್ಲರೆಗೆ ಹುಡುಕಿದಳು. ಪಕ್ಕನೆ ಸಿಗಲಿಲ್ಲ.ಕೊನೆಗೆ ಎಲ್ಲೆಲ್ಲೋ ಹುಡುಕಿ ಚಿಲ್ಲರೆ ಹಿಡಿದು ಹೊರಗೆ ಬಂದರೆ ಅಲ್ಲಿ ಆ ಮಹಿಳೆ ಇರಲಿಲ್ಲ. ಮರ್ಸಿಡಿಸ್ ಕಾರು ಇಳಿಯುತ್ತಿತ್ತು. `ಛೇ ಮೇಡಂ ಚೇಂಜ್ ತಗೊಳದೆ ಹೋದರಲ್ಲಾ..' ಅಂತ ಯೋಚಿಸುತ್ತಾ ಅವರು ಚಹಾ ಕುಡಿದ ಲೋಟ ತೆಗೆಯಲು ಮುಂದಾದಳು. ಅವಳಿಗೇ ಅಶ್ಚರ್ಯ. ಚಹಾ ಗ್ಲಾಸಿನ ಅಡಿಯಲ್ಲಿ ಐದು ಸಾವಿರ ರೂ. ಇತ್ತು! ಜತೆಗೊಂದು ಸಣ್ಣ ಪತ್ರ. ಮನುಷ್ಯ ಮನುಷ್ಯನನ್ನು ಯಾಕೆ ಇಷ್ಟೊಂದು ಪ್ರೀತಿಸುತ್ತಾನೋ ನನಗೆ ಅರ್ಥವಾಗುತ್ತಿಲ್ಲ. ಅವನೊಬ್ಬ ಗುಡ್ಡದಲ್ಲಿ ಸಿಕ್ಕಿ ನನಗೆ ಸಹಾಯ ಮಾಡಿದ. ನೀನು ನೋಡಿದರೆ ನನ್ನ ತಲೆ ಒರೆಸಿದೆ. ನಿನ್ನ ಮಕ್ಕಳು, ಕುಟುಂಬ ಚೆನ್ನಾಗಿರಲಮ್ಮ.. ನಾನು ನೇರವಾಗಿ ಕೊಟ್ಟರೆ ನೀನು ತೆಗೆದುಕೊಳ್ಳುವುದಿಲ್ಲವೇನೋ ಅನಿಸಿತು. ಅಲ್ಲಿ ಅವನೊಬ್ಬ ಕೂಡಾ ಬೇಡ ಅಂತ ಕೈಮುಗಿದಿದ್ದ. ಹಾಗಾಗಿ, ನಿನಗೆ ಹೇಳದೆ ಹೊರಟೆ. ತಪ್ಪು ತಿಳಿಬೇಡ.
ಗರ್ಭಿಣಿ ಹಾಗೇ ಕಣ್ಮುಚ್ಚಿಕೊಂಡಳು. ಕಳೆದ ರಾತ್ರಿ ನಡೆದ ಸಂಭಾಷಣೆ ನೆನಪಾಯಿತು. ಗಂಡನ ಎದೆ ಮೇಲೆ ತಲೆ ಇಟ್ಟ ಆಕೆ ಕೇಳಿದ್ದಳು: ಅಲ್ಲರಿ.. ಇನ್ನೇನು ತಿಂಗಳಲ್ಲಿ ಹೆರಿಗೆ ನಂಗೆ. ಒಂದೈದು ಸಾವಿರವಾದರೂ ಹಣ ಬೇಕು. ಎಲ್ಲಿಂದ ತರೋಣ?ಆಗ ಗಂಡ ಹೇಳಿದ್ದ: ದೇವರಿದ್ದಾನೆ ಕಣೆ, ಹೇಗೋ ಹೊಂದಾಣಿಕೆ ಆಗುತ್ತದೆ.
ಆ ಗಂಡನ ಹೆಸರು: ವಿಶ್ವನಾಥ!
ದಯಮಾಡಿ ಶಿಕ್ಷಕರೆಲ್ಲರೂ ಓದಲೇಬೇಕಾದ ವಿಷಯ
👏 ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ ಮೆಟ್ಟಿಲುಗಳನ್ನುಮಾಡಿಸಿಕೊಟ್ಟರು. ನಮ್ಮೂರ ಉದ್ಯಮಿ ಹಾಗು ಹಾಗು ರಾಜಕಾರಣಿಯೊಬ್ಬರು ಊರ ದೇವತೆಯ ದೇಗುಲದ ಬಾಗಿಲುಗಳಿಗೆ 50 ಲಕ್ಷ ರೂ. ಮೌಲ್ಯದ ಬೆಳ್ಳಿಯ ಹೊದಿಕೆ ಸಮರ್ಪಿಸಿದರು.
ಮೇಲಿನ ಮೂರೂ ಘಟನೆಗಳನ್ನು ನಾನು ವರದಿ ಮಾಡಿದ್ದೆ. ಹೀಗೆ ಈ ಸುದ್ದಿಗಳನ್ನು ಬರೆಯುವಾಗ ದೇಣಿಗೆ ನೀಡಿದವರ ಕುರಿತು “ಎಂಥ ದಾನಿಗಳಪ್ಪ” ಎಂಬ ಅಭಿಮಾನದ ಭಾವನೆ ಮೂಡಿತಾದರೂ ಮತ್ತೊಂದು ಕಡೆ ಮನಸ್ಸು ಹೇಳುತ್ತಿತ್ತು “ಇವರುಗಳಿಗೆ ಇದು ಯಾವ ಲೆಕ್ಕ” ಎಂದು. ಆದರೂ ಉಳ್ಳವರು ಎಲ್ಲರೂ ಇಷ್ಟೊಂದು ದೇಣಿಗೆ ನೀಡುವರೇ ಎಂಬ ಪ್ರಶ್ನೆ ಮೂಡಿ ಮೇಲಿನವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು.
ಇದೊಂದು ಘಟನೆ ನನಗೆ ಮೇಲಿನ ಮೂರೂ ಘಟನೆಗಳನ್ನು ಮರೆಯುವಂತೆ ಮಾಡಿತ್ತು. ಮೇಲ್ಕಾಣಿಸಿದ ದಾನಿಗಳಿಗಿಂತ ಈ 1 ಸಾವಿರ ರೂ. ಬಹುಮಾನ ನೀಡಿದ್ದ ಹೈಸ್ಕೂಲ್‍ನ ಮೇಡಂ ತುಂಬಾ ದೊಡ್ಡವರು ಎನ್ನಿಸಿದರು. ಅವರ ಸ್ವಾಭಿಮಾನ, ಮಾತಿಗೆ ತಪ್ಪದ ನಡತೆ ಹಾಗೂ ತಮ್ಮ ವಿದ್ಯಾರ್ಥಿಗಳ ಮೇಲೆ ಅವರು ಇಟ್ಟಿದ್ದ ನಂಬಿಕೆ, ಈ ಮೇಡಂ ಅವರ ವ್ಯಕ್ತಿತ್ವವನ್ನು ಮೇಲೆ ಕಾಣಿಸಿದ ಮಹನೀಯರುಗಿಂತಲೂ ಎತ್ತರಕ್ಕೆ ಒಯ್ದಿತ್ತು.
ಅದು ದಾವಣಗೆರೆಯ ಸೇಂಟ್ ಜಾನ್ಸ್ ಹೈಸ್ಕೂಲ್. ಅಲ್ಲಿ ಗಣಿತ ವಿಷಯ ಭೋಧಿಸುತ್ತಿದ್ದ ಮೇಡಂ ಅವರು ಬಡ ಕುಟುಂಬಕ್ಕೆ ಸೇರಿದ ಪ್ರತಿಭಾನ್ವಿತ ಶಿಕ್ಷಕಿ. ಶಾಲೆಯ ವೇತನದಿಂದಲೇ ಜೀವನ ನಿರ್ವಹಿಸುವ ಸ್ಥಿತಿ ಅವರದ್ದು. ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ತಾನು ಹೇಗೆ ಗಣಿತವನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದ್ದೇನೆ ಎಂಬುದನ್ನು ಓರೆಗೆ ಹಚ್ಚುವ ಸಲುವಾಗಿ ಉತ್ಸಾಹದಿಂದ ತಮ್ಮ ವಿದ್ಯಾರ್ಥಿಗಳಿಗೆ ಒಂದು ವಾಗ್ದಾನ ಮಾಡಿದರು. “ಎಸ್ಸೆಸ್ಸೆಲ್ಸಿಯಲ್ಲಿ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದವರಿಗೆ 1 ಸಾವಿರ ರೂ. ಬಹುಮಾನ ನೀಡುತ್ತೇನೆ” ಎಂದು ಹೇಳಿದ್ದರು.
ಫಲಿತಾಂಶ ಪ್ರಕಟವಾಯಿತು. ನನ್ನ ಮಗನೂ ಸೇರಿದಂತೆ ನಾಲ್ಕು ಜನರು ಗಣಿತದಲ್ಲಿ 100 ಕ್ಕೆ 100 ಅಂಕ ಗಳಿಸಿದ್ದರು. ತನ್ನ ವಿದ್ಯಾರ್ಥಿಗಳ ಈ ಸಾಧನೆ ಕಂಡು ಮೇಡಂ ಅವರು ತಮ್ಮ ಸ್ವಂತ ಮಕ್ಕಳೇ ಈ ಸಾಧನೆ ಮಾಡಿದ್ದಾರೇನೊ ಎಂಬಂತೆ ಹಿಗ್ಗಿ ಹೋಗಿದ್ದರು. ಈ ಮಕ್ಕಳ ಸಾಧನೆಯನ್ನು ಸಹೋದ್ಯೋಗಿಗಳು ಹಾಗೂ ಬಂಧು-ಮಿತ್ರರಲ್ಲಿ ಹೇಳಿಕೊಂಡು ಹೆಮ್ಮೆಯಿಂದ ಬೀಗಿದ್ದರು. ಅಂದು ವಿದ್ಯಾರ್ಥಿಗಳು ಮಾಸ್ಕರ್ಡ್ ಪಡೆದುಕೊಳ್ಳಲು ಶಾಲೆಗೆ ಹೋದಾಗ ಅವರಿಗೆ ಸಿಹಿ ತಿನ್ನಿಸಿ 100 ಕ್ಕೆ 100 ಅಂಕ ಪಡೆದಿದ್ದ ನಾಲ್ವರಿಗೂ ತಲಾ 1000 ರೂ ಇದ್ದ ಕವರ್ ನೀಡಿ ವಿಶ್ ಮಾಡಿ ಕಳುಹಿಸಿದರು.
ಮನೆಗೆ ಬಂದು ತಮ್ಮ ಮೇಡಂ ನೀಡಿದ್ದ ಕವರನ್ನು ಹೆಮ್ಮೆಯಿಂದ ತೆರೆದು ಅದರಲ್ಲಿದ್ದ 1000 ರೂಗಳನ್ನು ನನಗೆ ಹಾಗೂ ಪತ್ನಿಗೆ ತೋರಿಸುತ್ತಾ ಈ ಸಾವಿರ ರೂ. ಸಂಪೂರ್ಣವಾಗಿ ತನಗೇ ಸೇರಿದ್ದೆಂದು, ತಮ್ಮ ಗಣಿತದ ಟೀಚರ್ ನೀಡಿರುವ ಬಹುಮಾನ ಇದು ಎಂದೂ ತಿಳಿಸಿದನು. 1000 ರೂ. ಹಣವನ್ನು ನಮ್ಮೆದುರೇ ಎಣಿಸಿದನು. ಅದರಲ್ಲಿ 100ರ 4 ನೋಟುಗಳು, 50ರ 4 ನೋಟುಗಳಿದ್ದವು. ಉಳಿದವು 20, 10 ಹಾಗು 5 ರೂ.ಗಳ ನೋಟುಗಳಾಗಿದ್ದವು.
ನನ್ನ ಮಗ ಹೆಮ್ಮೆಯಿಂದ ಹಣ ಎಣಿಸುತ್ತಿದ್ದರೆ ನನ್ನಲ್ಲಿ ಮಾತ್ರ ಆತಂಕ ಮನೆ ಮಾಡಿತ್ತು. ಅರಿವಿಲ್ಲದಂತೆಯೇ ಕಣ್ಣಾಳೆಗಳು ಒದ್ದೆಯಾದವು. ಮಗನಿಂದ ಹಾಗೆ ಆ ಹಣವನ್ನು ಪಡೆದುಕೊಂಡೆ. ಆ ನೋಟುಗಳಿಂದ ಜೀರಿಗೆಯ ವಾಸನೆ ಬರುತ್ತಿತ್ತು. ಆಗಂತೂ ನನಗೆ ದುಃಖ ತಡೆಯಲಾಗಲಿಲ್ಲ. ಖಂಡಿತವಾಗಿಯೂ ಈ ಹಣವನ್ನು ಮೇಡಂ ಅವರು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದರು ಎಂಬುದು ನಿಶ್ಚಿತವಾಗಿತ್ತು.
ಶಾಲಾ ಆಡಳಿತ ಮಂಡಳಿ ಆರ್ಥಿಕ ಮುಗ್ಗಟ್ಟಿನಿಂದ ನಾಲ್ಕೈದು ತಿಂಗಳಿನಿಂದ ಸಿಬ್ಬಂದಿಗೆ ವೇತನವನ್ನೇ ನೀಡಿರಲಿಲ್ಲ. ಆಡಳಿತಮಂಡಳಿಯ ಅನೇಕರು ನನಗೆ ಆತ್ಮೀಯರು ಆಗಿದ್ದರಿಂದ ಅಲ್ಲಿನ ಆಗುಹೋಗುಗಳ ಬಗ್ಗೆ ನನಗೆ ತಿಳಿದಿತ್ತು.
ಮಗನಿಂದ ಆ 1000 ರೂ.ಗಳನ್ನು ಪಡೆದು ನನ್ನ ಬಳಿಯಿದ್ದ 500ರ ಎರಡು ನೋಟುಗಳನ್ನು ಅವನಿಗೆ ಕೊಟ್ಟೆ. ಅವನಿಗೆ ಏನೂ ತಿಳಿಸದೆ ನೇರವಾಗಿ ಹಣ್ಣಿನ ಅಂಗಡಿಗೆ ಹೋಗಿ ಒಂದಷ್ಟು ಹಣ್ಣು ಖರೀದಿಸಿ ಆ ಮೇಡಂ ಅವರ ಮನೆಗೆ ಬಂದೆ. ಮೊದಲಿಗೆ ಹಣ್ಣುಗಳನ್ನು ನೀಡಿ ನನ್ನ ಮಗ ಸೇರಿದಂತೆ ನಾಲ್ವರು 100 ಕ್ಕೆ 100 ಅಂಕ ಗಳಿಸಲು ಕಾರಣರಾಗಿದ್ದಕ್ಕೆ ಅಭಿನಂದಿಸಿದೆ. ಅವರ ಕಣ್ಣುಗಳು ಮಿಂಚಿದವು. “ಸರ್, ಇನ್ನೂ ಮೂವರು ವಿದ್ಯಾರ್ಥಿಗಳು ತಲಾ 99 ಹಾಗು ಐವರು ವಿದ್ಯಾರ್ಥಿಗಳು ತಲಾ 98 ಅಂಕಗಳಿಸಿದ್ದಾರೆ, ಛೇ… ಇನ್ನು ಒಂದೆರಡು ಅಂಕ ಗಳಿಸಿದ್ದರೆ” ಎಂದರು. ಅವರ ಧ್ವನಿಯಲ್ಲಿ ಆ ವಿದ್ಯಾರ್ಥಿಗಳ ಬಗ್ಗೆಯೂ ಹೆಮ್ಮೆ ಇದ್ದುದು ತಿಳಿಯುತ್ತಿತ್ತು. ನಾನು ಅವರನ್ನು ಮತ್ತೆ ಅಭಿನಂದಿಸುತ್ತಾ ಅವರು ನೀಡಿದ್ದ 1000 ರೂಗಳ ಜೊತೆಗೆ ನನ್ನದೂ 1000 ರೂ. ಸೇರಿಸಿ 2000 ರೂಗಳಿದ್ದ ಕವರನ್ನು ಅವರಿಗೆ ನೀಡಲು ಮುಂದಾದೆ. ನೀವು ಉತ್ತಮವಾಗಿ ಪಾಠ ಮಾಡಿದ್ದಕ್ಕೆ ನನ್ನ ಮಗ 100 ಕ್ಕೆ 100 ಅಂಕ ಗಳಿಸಿದ್ದಾನೆ. ಇದು ನಿಮ್ಮ ಶಿಷ್ಯ ನಿಮಗೆ ನೀಡುತ್ತಿರುವ ಚಿಕ್ಕ ಗುರು ಕಾಣಿಕೆ ಎಂದು ಸ್ವೀಕರಿಸಿ ಎಂಬುದಾಗಿ ಪರಿಪರಿಯಾಗಿ ಬೇಡಿದರೂ ಅವರು ಒಪ್ಪಲಿಲ್ಲ. ನೀವು ತಂದಿರುವ ಹಣ್ಣುಗಳನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ನನ್ನ ಆತ್ಮ ತೃಪ್ತಿಗೆ ನನ್ನ ವಿದ್ಯಾರ್ಥಿಗಳಿಗೆ ನಾನು ಬಹುಮಾನವಾಗಿ ನೀಡಿರುವ ಹಣವನ್ನು ನೀವು ಹಿಂದಿರುಗಿಸುವ ಪ್ರಯತ್ನ ಮಾಡಬೇಡಿ ಎನ್ನುತ್ತಲೇ ಆತ್ಮೀಯವಾಗಿ ಬೀಳ್ಕೊಟ್ಟರು. ಹೀಗೆ ಹೇಳುವಾಗ “ಆಡಳಿತ ಮಂಡಳಿ ನಮಗೆ ವೇತನ ನೀಡಿಲ್ಲ ಎಂಬ ಆತಂಕ ನಿಮಗಿರುವುದು ನನಗೆ ಗೊತ್ತು. ಸರ್ ನಮಗೆ ಅತ್ಯಂತ ಸರಳವಾದ ಜೀವನದ ಅನುಭವ ಇದೆ. ಕಷ್ಟಪಟ್ಟು, ಇಷ್ಟಪಟ್ಟು ವಿದ್ಯಾರ್ಥಿಗಳಿಗಾಗಿ, ಶಾಲೆಗಾಗಿ ದುಡಿಯುತ್ತಿದ್ದೇವೆ. ಭಗವಂತ ನಮ್ಮ ಕೈ ಬಿಡುವುದಿಲ್ಲ” ಎಂದರು.
ಇಂದೂ ಆ 1000 ರೂ. ಹಣ ನಮ್ಮ ಬಳಿ ಇದೆ. ಅದನ್ನು ನೋಡಿದಾಗೊಮ್ಮೆ ನನಗನ್ನಿಸುತ್ತದೆ, ಚಿನ್ನದ ಕಿರೀಟ, ಬಂಗಾರದ ಮೆಟ್ಟಿಲು ಹಾಗೂ ಬೆಳ್ಳಿಯ ಬಾಗಿಲುಗಳನ್ನು ದೇಣಿಗೆ ನೀಡಿದ ಆ ಮಹನೀಯರುಗಳಿಗಿಂತ ನಮ್ಮ ಮೇಡಂ ಒಂದು ತೂಕ ಹೆಚ್ಚು ಎಂದು, ನೀವೇನಂತೀರಾ?
40 ಕೋಟಿಯ ಚಿನ್ನದ ಕಿರೀಟ ನೀಡಿದ ಜನಾರ್ಧನರೆಡ್ಡಿ ಜೈಲಿಗೆ ಹೋಗಿ ಬಂದರು. 10 ಕೋಟಿಯ ಬಂಗಾರದ ಮೆಟ್ಟಿಲು ಮಾಡಿಸಿಕೊಟ್ಟಿದ್ದ ವಿಜಯ್ ಮಲ್ಯ ದೇಶವನ್ನೇ ಬಿಟ್ಟು ಓಡಿ ಹೋದರು. ಆದರೆ ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ ಇನ್ನೂ ಅದೇ ಶಾಲೆಯಲ್ಲೇ ನೂರಾರು, ಸಾವಿರಾರು ವಿದ್ಯಾರ್ಥಿಗಳ ಹೆಮ್ಮೆಯ ಶಿಕ್ಷಕಿಯಾಗಿ ಗೌರವಿಸಲ್ಪಡುತ್ತಿದ್ದಾರೆ, ಪೂಜಿಸಲ್ಪಡುತ್ತಿದ್ದಾರೆ.
ಸೋತು ನೆಲಕಚ್ಚಿದ ಆತ ನೆಲದಿಂದಲೇ ಮೇಲೆದ್ದ!
ಅದೊಂದು ದಿನ ಇನ್ನು ಲೈಫೇ ಇಲ್ಲ ಅಂತ ಬಸ್ಸ್ಟಾಂಡ್ನಲ್ಲಿ ತಲೆಬಗ್ಗಿಸಿ ಕೂತಿದ್ದ, ಹಾಗೇ ಮಂಪರು. ಸಣ್ಣ ಪೆಟ್ಟು ಬಿದ್ದ ಹಾಗಾಗಿ ಎಚ್ಚರವಾಯ್ತು.
ಒಂದು ಬಾರಿಯಲ್ಲ,ಅದೆಷ್ಟು ಬಾರಿ ಅಂತ ಲೆಕ್ಕ ಇಟ್ಟಿಲ್ಲ ಅವನು.ಡಿಗ್ರಿ ಮುಗಿದಿದ್ದೇ ಕೆಲಸಕ್ಕೆ ಟ್ರೈ ಮಾಡಿದ. ಇಂಟರ್‌ವ್ಯೆ ಅಟೆಂಡ್ ಮಾಡಿದ್ದೇ ಬಂತು. ಎಲ್ಲೂ ಕೆಲಸ ಸಿಗಲಿಲ್ಲ. ಬರೀ ನಿರಾಸೆ. ಕೊನೆಗೆ ತನ್ನದಲ್ಲದ ಫೀಲ್ಡ್‌ಗಳನ್ನು ಟ್ರೈ ಮಾಡಲಾರಂಭಿಸಿದ. ಒಂದು ಶಾಲೆಯಲ್ಲಿ ಮೇಷ್ಟ್ರ ಕೆಲಸ ಸಿಕ್ಕಿತು. ಮಕ್ಕಳ ಜೊತೆಗೆ ಒಡನಾಡಿಯೇ ಗೊತ್ತಿಲ್ಲದ ಆತ ನಿತ್ಯ ಒದ್ದಾಡಲಾರಂಭಿಸಿದ. ಈ ಒದ್ದಾಟದ ನಡುವೆಯೇ ಮದುವೆಯಾದ. ಅವನ ಗೆಳತಿಯೇ ಅವಳು. ಬದುಕಲ್ಲಿ ಸಿಕ್ಕ ಏಕೈಕ ಗೆಲುವಿನ ಹಾಗಿದ್ದಳು. ಮಕ್ಕಳೊಂದಿಗೆ ಒದ್ದಾಡಿ ಬರುವವನ್ನು ಸಮಾಧಾನ ಮಾಡುತ್ತಿದ್ದಳು.
ಅವಳ ಒಡನಾಟದಲ್ಲಿ ಶಾಲೆಯ ಕೆಲಸದಲ್ಲಿ ಸ್ವಲ್ಪ ಚೇತರಿಕೆ ಬಂತು ಅನ್ನುವಷ್ಟರಲ್ಲಿ ಮತ್ತೆ ಅವನನ್ನು ಕೆಲಸದಿಂದ ಕಿತ್ತು ಹಾಕಿದರು. ಪತ್ನಿ ಎಂದಿನಂತೆ ಸಮಾಧಾನ ಮಾಡಿದಳು. ಅವಳ ಸಂಬಳದಲ್ಲೇ ಮನೆ ಕಷ್ಟದಲ್ಲಿ ನಡೆಯುತ್ತಿತ್ತು. ಅವನು ಬೇರೆ ಬೇರೆ ಕೆಲಸ ಹುಡುಕುತ್ತಲೇ ಇದ್ದ. ಅದೊಂದು ದಿನ ಇನ್ನು ಲೈಫೇ ಇಲ್ಲ ಅಂತ ಬಸ್ಸ್ಟಾಂಡ್ನಲ್ಲಿ ತಲೆಬಗ್ಗಿಸಿ ಕೂತಿದ್ದ, ಹಾಗೇ ಮಂಪರು. ಸಣ್ಣ ಪೆಟ್ಟು ಬಿದ್ದ ಹಾಗಾಗಿ ಎಚ್ಚರವಾಯ್ತು. ನೋಡಿದರೆ ಚಿಕ್ಕ ಮಗು ರಪ ರಪನೆ ಹೊಡೆಯುತ್ತಿದೆ! ಸಿಟ್ಟು ಬಂತು, ಬೈಯಲೆಂದು ಹೊರಟವನಿಗೆ ಅದು ಬುದ್ದಿಮಾಂದ್ಯ ಮಗು ಅಂತ ಗೊತ್ತಾಯ್ತು. ಅಷ್ಟರಲ್ಲಿ ತಾಯಿ ಓಡಿ ಬಂದು ಮಗುವನ್ನು ಹಿಡಿದುಕೊಂಡಳು.
ಕ್ಷಮೆ ಯಾಚಿಸುವ ಮುಖಭಾವದಲ್ಲಿ ಇವನನ್ನು ನೋಡಿದಳು. ಕರುಳು ಚುರುಕ್ ಅಂದ ಹಾಗಾಯ್ತು. ಮಗುವನ್ನು ಎತ್ತಿಕೊಂಡ. ಅದು ಅಬೋಧವಾಗಿ ಎತ್ತಲೋ ನೋಡುತ್ತಿತ್ತು. ಒಂದಿಷ್ಟು ಹೊತ್ತು ಮಗುವಿನ ಜೊತೆಗೆ ಕಳೆದ. ಭಾರವಾದ ಮನಸ್ಸು ಹಗುರವಾಯ್ತು. ಆ ಮಗು ಮತ್ತು ತಾಯಿ ಪಕ್ಕದ ಮನೆಯಲ್ಲೇ ಇರುವುದು ಗೊತ್ತಾಯ್ತು. ಮನೆಗೆ ಬಂದು ಪತ್ನಿಯಲ್ಲಿ ತಾನು ಕಂಡ ಮಗುವಿನ ವಿಷಯ ಹೇಳಿದ.
‘ಹೇಗಾದರೂ ಮನೆಯಲ್ಲಿ ಇರುತ್ತೀಯಲ್ಲಾ, ನಿನಗೆ ಖುಷಿ ಕೊಡೋದಾದ್ರೆ ಯಾಕೆ ಆ ಮಗುವಿನ ಜೊತೆಗೆ ಒಂದಿಷ್ಟು ಹೊತ್ತು ಇರಬಾರದು?’ ಪತ್ನಿ ಕೇಳಿದಳು. ಇವನಿಗೂ ಹೌದೆನಿಸಿತು. ಪಕ್ಕದಲ್ಲೇ ಆ ಮಗುವಿನ ಮನೆ. ಇವನು ಸ್ವಲ್ಪ ಹೊತ್ತು ಮಗುವನ್ನು ನೋಡಿಕೊಳ್ಳುತ್ತಾನೆ ಅನ್ನೋದು ಆ ತಾಯಿಗೂ ಸಮಾಧಾನ. ಆದರೆ ಆ ತಾಯಿ ಒಂದು ಹೊಸ ಆಫರ್ ಕೊಟ್ಟಳು. ‘ಮಾನಸಿಕ ಸಮಸ್ಯೆ ಇರುವ ಕೆಲವೊಂದು ಮಕ್ಕಳು ಈ ಸ್ಟ್ರೀಟ್‌ನಲ್ಲಿದ್ದಾರೆ, ನೀವ್ಯಾಕೆ ಈ ಎಲ್ಲ ಮಕ್ಕಳನ್ನು ಸೇರಿಸಿ ಒಂದು ಶಾಲೆ ತೆರೆಯಬಾರದು?’ ಅಂತ. ಹಿಂಜರಿದರೂ, ಸಣ್ಣ ಭಯ
ದಲ್ಲೇ ಒಪ್ಪಿಕೊಂಡ. ಇಂತಿಷ್ಟು ಫೀಸ್ ನಿಗದಿಯಾಯ್ತು.
ಕೆಲವು ದಿನಕ್ಕೇ ಸಹಾಯಕರು ಬಂದರು. ಆತ ಇಂಥಾ ಮಕ್ಕಳ ಕಲಿಕೆಗೆ ಪೂರಕವಾಗುವಂಥಾ ಹೊಸ ಹೊಸ ಪ್ರಯೋಗ ಮಾಡತೊಡಗಿದ. ಹೊಸ ಹೊಸ ಆಟಗಳನ್ನು ಪರಿಚಯಿಸಿದ, ಆಟಿಕೆಗಳನ್ನು ತಾನೇ ರೂಪಿಸಿದ. ಈತನ ಚಟುವಟಿಕೆಯಿಂದ ಹತ್ತಿರದಿಂದ ಕಂಡ ಪೋಷಕರಿಂದ ಸುದ್ದಿ ಬೇರೆ ಕಡೆಯೂ ಹಬ್ಬಿ. ಈತ ಜನಪ್ರಿಯನಾಗುತ್ತಾ ಹೋದ. ವನ್ ಫೈನ್ ಡೇ ಈ ಮಕ್ಕಳಿಗಾಗಿ ಶಾಲೆಯನ್ನೂ ತೆರೆದ. ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಯ್ತು. ಈತ ಈ ಮಕ್ಕಳ ಪೋಷಕರಿಗೆ ಕೌನ್ಸಿಲಿಂಗ್ ಮಾಡಲಾರಂಭಿಸಿದ. ಅವನ ಮಾತುಗಳಿಗೆ, ಈತ ತಯಾರಿಸಿದ ಆಟಿಕೆಗಳಿಗೆ ಆನ್‌ಲೈನ್ ಮಾರ್ಕೆಟ್ ಹೆಚ್ಚುತ್ತಾ ಹೋಯ್ತು.
ಒಂದು ಕಾಲದ ದುರಾದೃಷ್ಟವಂತ ಈಗ ಜಗತ್ತಿನಾದ್ಯಂತ ಪ್ರಸಿದ್ಧನಾದ. ಇಷ್ಟಲ್ಲ ಆದರೂ ನಿತ್ಯಮಕ್ಕಳ ಜೊತೆಗಿನ ಒಡನಾಟ ತಪ್ಪಿಸುತ್ತಿರಲಿಲ್ಲ.
ಯಾವುದೋ ಒಂದು ಹೊತ್ತಲ್ಲಿ ಏನೋ ನೆನಪಾದಂತಾಗಿ ಪತ್ನಿಯನ್ನು ಕರೆದು ಕೇಳಿದ, ‘ನಾನಷ್ಟು ಸಲ ಬಿದ್ದಾಗಲೂ ಸಮಾಧಾನ ಮಾಡಿದೆಲ್ಲ, ನಾನೂ ಒಂದು ದಿನ ಗೆಲ್ಲಬಲ್ಲೆ ಅಂತ ನಿನಗೆ ನಿಜಕ್ಕೂ ಗೊತ್ತಿತ್ತಾ?’ ಅವಳಂದಳು, ‘ನೋಡು, ನಾನು ರೈತ ಕುಟುಂಬದಿಂದ ಬಂದವಳು. ನಾವು ಹೊಲದಲ್ಲಿ ಟೊಮ್ಯಾಟೋ ಹಾಕ್ತೀವಿ ಅಂತಿಟ್ಕೋ. ನಾವೆಷ್ಟು ಪ್ರಯತ್ನ ಪಟ್ಟರೂ ಬೆಳೇನೇ ಮೇಲೋಳೋದಿಲ್ಲ. ಆಗ ನಾವು ಬೀನ್ಸ್ ಟ್ರೈ ಮಾಡ್ತೀವಿ, ಅದೂ ಆಗ್ಲಿಲ್ಲ ಅಂದ್ರೆ ಮತ್ಯಾವುದೋ ಬೆಳೆ. ಒಂದಲ್ಲ ಒಂದು ಬೆಳೆ ನಮ್ಮ ಕೈ ಹಿಡೀತದೆ. ಅದ್ಯಾವ ಬೆಳೆ ಅನ್ನೋದು ಗೊತ್ತಾಗೋದಕ್ಕೆ ಒಂದಿಷ್ಟು ಟೈಮ್ ಬೇಕಷ್ಟೇ. ನಮ್ಮ ಬದುಕಿನಲ್ಲೂ ಹೀಗೇ ಅಂದ್ಕೊಂಡೆ ನಾನು. ನಿನ್ನ ಕ್ಷೇತ್ರ ಯಾವ್ದ ಅಂತ ಕೊನೆಗೂ ಗೊತ್ತಾಯ್ತು.’ ಅವನು ಅವಳ ಕಾಲ ಮೇಲೆ ತಲೆಯಿಟ್ಟು ಸಣ್ಣಗೆ ಅಳುತ್ತಿದ್ದ!
ಮುಂದೊಂದು ದಿನ ನೀನೂ ಮುದುಕ ಆಗ್ತೀಯ!
ಒಬ್ಬ ರೈತನಿಗೆ ಬಹಳ ವಯಸ್ಸಾಗಿತ್ತು. ಅವನಿಗೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದಾ ವರಾಂಡದಲ್ಲೇ ಕುಳಿತುಕೊಂಡು ದಿನ ಕಳೆಯುತ್ತಿದ್ದನು. ಅವನ ಮಗ ಯಾವಾಗಲೂ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಮಗನು ಯಾವ ಸಮಯದಲ್ಲಿ ನೋಡಿದರೂ ಅವರ ತಂದೆ ಅಲ್ಲಿಯೇ ಕುಳಿತಿರುವುದು ಕಾಣುತ್ತಿತ್ತು."ಇವರು ಇನ್ನು ಮುಂದೆ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ" ಎಂದು ಮಗನು ಭಾವಿಸಿದನು. "ಇನ್ನು ಮುಂದೆ ಇವರಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಯಿತು. ಇದರಿಂದ ಮಗನಿಗೆ ತುಂಬಾ ನಿರಾಸೆಯಾಯಿತು.
ಒಂದು ದಿನ ಮಗನು ಒಂದು ದೊಡ್ಡದಾದ ಮರದ ಶವದ ಪೆಟ್ಟಿಗೆಯನ್ನು ತಯಾರು ಮಾಡಿಸಿದನು. ಮತ್ತು ಅದನ್ನು ವರಾಂಡದಲ್ಲಿ ಎಳೆದು ತಂದು ಅವರ ತಂದೆಗೆ ಒಳಗೆ ಮಲಗಿಕೊಳ್ಳಲು ಹೇಳಿದನು. ಏನೂ ಮಾತನಾಡದೇ ಅವರ ತಂದೆ ಅದರ ಮೇಲೆ ಏರಿ ಒಳಗೆ ಮಲಗಿದರು. ನಂತರ ಮಗನು ಆ ಶವದ ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ, ಅದನ್ನು ಹೊಲದ ಕೊನೆಯಲ್ಲಿ ಇರುವ ದೊಡ್ಡದಾದ ಪ್ರಪಾತಕ್ಕೆ ಎಳೆದು ತರುತ್ತಿದ್ದನು.
ಆ ಪ್ರಪಾತ ಸಮೀಪಿಸುತ್ತಿದ್ದಂತೆ ಶವದ ಪೆಟ್ಟಿಗೆಯ ಒಳಗಿನಿಂದ ನಿಧಾನವಾಗಿ ಮುಚ್ಚಳ ಸರಿದಾಡಲಾರಂಭಿಸಿತು. ಮಗನು ಆ ಮುಚ್ಚಳವನ್ನು ತೆರೆದು ನೋಡಿದನು. ಅದರ ಒಳಗೆ ಅವರ ತಂದೆ ಪ್ರಶಾಂತವಾಗಿ ಮಲಗಿದ್ದರು. ಅವರ ತಂದೆ ಮಗನ ಕಡೆ ನೋಡಿ "ಮಗನೇ ನೀನು ನನ್ನನ್ನು ಪ್ರಪಾತದಿಂದ ಕೆಳಗೆ ತಳ್ಳಲು ಕರೆದೊಯ್ಯುತ್ತಿದ್ದೀಯ ಅಂತ ನನಗೆ ಗೊತ್ತಿದೆ. ಆದರೆ ನೀನು ಹಾಗೆ ಮಾಡುವುದಕ್ಕಿಂತ ಮೊದಲು ನಾನು ನಿನಗೆ ಒಂದು ಸಲಹೆಯನ್ನು ನೀಡಲೇ? ಎಂದು ಕೇಳಿದನು. "ಏನದು..?" ಎಂದು ಮಗನು ಕೇಳಿದನು. "ನೀನು ನನ್ನನ್ನು ಪ್ರಪಾತದಿಂದ ಎಸೆಯಬೇಕು ಎಂದು ಬಯಸಿದರೆ ನನ್ನನ್ನು ಎಸೆದು ಬಿಡು. ಆದರೆ ಈ ಅತ್ಯುತ್ತಮವಾದ ಮರದ ಶವದ ಪೆಟ್ಟಿಗೆಯನ್ನು ಉಳಿಸಿ ಜೋಪಾನವಾಗಿ ಕಾಪಾಡು. ಮುಂದೆ ನಿನ್ನ ಮಕ್ಕಳು ಇದನ್ನು ಬಳಸಲು ಉಪಯುಕ್ತವಾಗುತ್ತದೆ!" ಎಂದು ಹೇಳಿದನು ಆ ವೃದ್ಧ ತಂದೆ. ಆಗ ಮಗನಿಗೆ ತನ್ನ ತಪ್ಪಿನ ಅರಿವಾಯಿತು. ತಂದೆಯ ಕ್ಷಮೆ ಕೇಳಿ, ಗೌರವದಿಂದ ತಂದೆಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋದನು.
ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
10 ಜನರಿರುವ ಗುಂಪೊಂದು ದಟ್ಟ ಕಾಡಿನೊಳಗೆ ಪ್ರವೇಶಿಸಿತು. ಹೀಗೆ ನಡೆಯುತ್ತಿರುವಾಗ ದಾರಿ ತಪ್ಪಿ ಬೇರೆ ದಾರಿಯಲ್ಲಿ ಸಾಗಿ ಮರುಭೂಮಿ ತಲುಪಿದರು. ಅವರಿಗೆ ತುಂಬಾ ಬಾಯಾರಿಕೆಯಾಯಿತು. ಎಲ್ಲಾದರೂ ನೀರು ಸಿಗಬಹುದೇ ಎಂದು ಒಬ್ಬೊಬ್ಬರೂ ಒಂದೊಂದು ದಿಕ್ಕಿನಲ್ಲಿ ಹುಡುಕಲಾರಂಭಿಸಿದರು. ಅದರಲ್ಲಿ ಇಬ್ಬರು ಜೊತೆ ಸೇರಿ ತುಂಬಾ ದೂರ ನಡೆದರು. ಎಲ್ಲಿಯೂ ನೀರು ಕಾಣಲಿಲ್ಲ. ಹೀಗೆ ನಡೆದು ತುಂಬಾ ದೂರ ಸಾಗಿದಾಗ ಒಂದು ದೂರದಲ್ಲಿ ನೀರು ಹರಿಯುತ್ತಿರುವ ಶಬ್ದ ಮತ್ತು ಪಕ್ಷಿಗಳ ಇಂಚರ ಕೇಳಿ ಬಂದಿತು. ಅವರರಿಬ್ಬರು ಆ ದಿಕ್ಕಿನತ್ತ ಸಾಗಿದರು. ಆಗ ಒಂದು ದೊಡ್ಡದಾದ ಗೋಡೆಯಿತ್ತು ಅದರಾಚೆಗೆ ನೀರು ಮತ್ತು ಹಣ್ಣುಗಳ ಮರ ಕಾಣಿಸಿದವು. ಗೋಡೆಯನ್ನು ಕಷ್ಟಪಟ್ಟು ಏರಿ, ಆಚೆ ಕಡೆಗೆ ಜಿಗಿದು ಕೊಳದ ಸಮೀಪಕ್ಕೆ ನೀರು ಕುಡಿಯಲು ಓಡೋಡಿ ಬಂದರು. ಬಗ್ಗಿ ನೀರನ್ನು ಬೊಗಸೆಯಷ್ಟು ತೆಗೆದು ಇನ್ನೇನು ಕುಡಿಯಬೇಕು ಅನ್ನುವಷ್ಟರಲ್ಲಿ ಅವರ ಜೊತೆ ಬಂದ ಇತರ ಸ್ನೇಹಿತರನ್ನು ನೆನಪಾಯಿತು. ತಕ್ಷಣವೆ ಕೊಳದಿಂದ ಹಿಂದೆಕ್ಕೆ ಬಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ನಂತರ ಕುಡಿಯುವ ಎಂದು ಹಿಂತಿರುಗಿದರು.
ಸನ್ಯಾಸಿಗಳು ಆಚರಿಸಿದ ಮೌನವೃತದ ಕಥೆ
ನಾಲ್ಕು ಜನ ಯುವ ಸನ್ಯಾಸಿಗಳು ಒಂದು ಕಡೆ ಸೇರಿ ಪರಸ್ಪರ ಮಾತನಾಡಿಕೊಂಡು ಎರಡು ವಾರಗಳ ಕಾಲ ಮೌನವೃತ ಮಾಡುತ್ತಾ ಧ್ಯಾನ ಮಾಡಲು ತೀರ್ಮಾನಿಸಿದರು. ಆ ರೀತಿ ನಿರ್ಧರಿಸಿದ ರಾತ್ರಿ ಮೇಣದ ಬತ್ತಿ ಹಚ್ಚಿ ಧ್ಯಾನ ಮಾಡುತ್ತಿದ್ದಾಗ ಜೋರಾಗಿ ಗಾಳಿ ಬೀಸಿ ಅಲ್ಲಿದ್ದ ಮೇಣದ ದೀಪವನ್ನು ನಂದಿಸಿತು. ಆಗ ಅಲ್ಲಿ ಪೂರ್ತಿ ಕತ್ತಲು ಆವರಿಸಿದ ಕಾರಣ ಅವರಿಗೆ ಏನೂ ಕಾಣುತ್ತಿರಲಿಲ್ಲ. ಆಗ ಅವರಲ್ಲಿ ಒಬ್ಬ ಸನ್ಯಾಸಿ "ಅಯ್ಯೋ ಮೇಣದ ಬೆಳಕು ಆರಿ ಹೋಯಿತು, ಏನೂ ಕಾಣುತ್ತಿಲ್ಲ, ದೀಪ ಹಚ್ಚಿ " ಎಂದು ಪಿಸುಗುಟ್ಟಿದನು. ಆಗ ಎರಡನೆಯವನು " ಹೇ, ಏಕೆ ಪಿಸುಗುಟ್ಟುತ್ತಿರುವೆ, ಇವತ್ತಿನಿಂದ ನಾವು ಮೌನ ವೃತದಲ್ಲಿ ಇದ್ದೇವೆ, ಮರೆಯಬೇಡ" ಎಂದು ಹೇಳಿದನು.
ಎರಡನೆಯವನು ಮಾತು ಕೇಳಿದ ಮೂರನೆಯ ಸನ್ಯಾಸಿ "ನೀವಿಬ್ಬರು ಸೇರಿ ಮೌನವೃತವನ್ನು ಮುರಿದು ಹಾಕಿದಿರಿ" ಎಂದು ಹೇಳಿದನು. ಇವರ ಮಾತುಗಳನ್ನು ಕೇಳುತ್ತಿದ್ದ ನಾಲ್ಕನೇ ವ್ಯಕ್ತಿ ಜೋರಾಗಿ ನಕ್ಕು "ಹೇ ನಾನೊಬ್ಬ ಮಾತ್ರ ಮಾತನಾಡಲಿಲ್ಲ" ಎಂದು ಹೇಳಿದನು!
ನಾನು ತುಂಬಾ ಕಾಲ ಬದುಕಿರಬೇಕು
ಬಾದಾಮಿ ಗಿಡ ನೆಟ್ಟು ಅದು ಬೆಳೆದು ದೊಡ್ಡದಾಗಿ ಬಾದಾಮಿ ಬಿಡಲು ತುಂಬಾ ಕಾಲ ಹಿಡಿಯುತ್ತೆ. ಆದರೆ ಹಣ್ಣು ಮುದುಕನೊಬ್ಬ ಪುಟ್ಟ ಬಾದಾಮಿ ಗಿಡವನ್ನು ತಂದು ನೆಡುತ್ತಿದ್ದ. ಇದನ್ನು ನೋಡಿದ ದಾರಿ ಹೋಕನೊಬ್ಬ ನೋಡಿದ. ಈ ಬಾದಾಮಿ ಗಿಡ ಬೆಳೆದು ದೊಡ್ಡದಾಗುವಷ್ಟು ಸಮಯ ಈ ಮುದುಕ ಬದುಕಿರುವುದಿಲ್ಲ. ಸುಮ್ಮನೆ ಏಕೆ ಕಷ್ಟ ಪಡುತ್ತಿದ್ದಾರೆ ಅನಿಸಿತು. ಅನಿಸಿದ್ದೇ ತಡ ಮುದುಕನ ಹತ್ತಿರ ಬಂದು "ನಿಮಗೆ ತುಂಬಾ ವಯಸ್ಸಾಗಿದೆ. ಇದು ಬೆಳೆದು ದೊಡ್ಡದಾಗಿ ಬಾದಾಮಿ ಬಿಡಲು ತುಂಬಾ ಕಾಲ ಹಿಡಿಯುತ್ತೆ" ಎಂದು ಹೇಳಿದನು.
ಆಗ ಮುದುಕ ಈ ರೀತಿ ಉತ್ತರಿಸಿದನು "ನಾನು ನನ್ನ ಜೀವನದಲ್ಲಿ ಎರಡು ವಿಷಯಗಳನ್ನು ಪಾಲಿಸುತ್ತೇನೆ. ಅದು ಏನಪ್ಪಾ ಅಂದರೆ ನಾನು ತುಂಬಾ ಕಾಲ ಬದುಕಿರಬೇಕು, ಮತ್ತೊಂದು ವಿಷಯ ಇದೇ ನನ್ನ ಕೊನೆಯ ದಿನ ಎಂದು ಭಾವಿಸುತ್ತೇನೆ".
ಅವನು ಮನೆಗೆ ಹಿಂತಿರುಗಿ ಬಂದು ಮೊದಲು ಮಾಡಿದ ಕೆಲಸವೆಂದರೆ ತಾನು ಈವರೆಗೆ ಓದಿದ ಎಲ್ಲಾ ಪುಸ್ತಕಗಳನ್ನು ತಂದು ಅಂಗಳದಲ್ಲಿ ಗುಡ್ಡೆ ಹಾಕಿ, ಆ ಪುಸ್ತಕಗಳಿಗೆ ಬೆಂಕಿ ಕೊಟ್ಟ
*ರೊಟ್ಟಿ ಊಟದ ಗಟ್ಟಿ ಸುಂದರಿಯರು!*
ಅಯ್ಯಯ್ಯೋ.... ಇಂದು ಕಲಬುರಗಿ ಹುಬ್ಬಳ್ಳಿ- ಗದಗ- ಬಿಜಾಪುರ ಬಾಗಲಕೋಟೆ, ಕೊಪ್ಪಳದಲ್ಲಿರುವ ಸಿಟಿ ಶೈಲಿಯ ಮಾನಿನಿಯರಿಗೆ ರೊಟ್ಟಿ ತಟ್ಟಲು ಬರುವುದಿಲ್ಲ ಅಂದರೆ ಎಂಥಾ ದುರಂತ ! ಅರವತ್ತು ವರ್ಷಗಳ ಹಿಂದೆ ನಮ್ಮವ್ವ ಮಾಡಿದ ಪರಾತ ಅಗಲದ ಆ ಗುಳಬುಟ್ಟಿ ರೊಟ್ಟಿ ; ಇಂದಿನ ಜನ ಕನಸಿನಲ್ಲೂ ಕಾಣಲಾರರು. ಪಕ್ಕಾ ಎರಿಮಣ್ಣಿನ ಕರೇ ಹೊಲದಲ್ಲಿ ಬೆಳೆದ ಬೆಳ್ಳಂಬಿಳಿ ಬಿಳಿಜೋಳ. ಅದರ ಹಿಟ್ಟು ನಕ್ಷತ್ರದ ಉಪ್ಪಿಟ್ಟು ! ಜೋಳದ ಹಿಟ್ಟಿಗೆ ಎಸರು ಬಂದ ನೀರು ಕೂಡಿಸಿ ಚರಚರ ನಾದುವುದೇ ಒಂದು ಅದ್ಭುತ ಕಲೆ. ಈಗಿನ ನಾಜೂಕು ನಾರಿಯರು ಅಂಗೈ -ಮುಂಗೈ ತಿಕ್ಕಿ, ಜೋಳದ ಜಿಗುಟಿಗೆ ಕೈಯಿಟ್ಟು ಚರಚರ ನಾದಿ ಕಲಿಸಲಾರರು. ಬಹಳವಾದರೆ ಚಮಚೆಯಿಂದ ಹಿಟ್ಟು ಕಲಿಸಬಹುದು ! ಅಂದಿನ ಹೆಂಗಸರು ಗಂಡಸರ ತಲೆಗೆ ಜಜ್ಜಿದರೆ ಅಲ್ಲಿ ಒಂದು ತಗ್ಗು ಬೀಳುತ್ತಿತ್ತು ! ಹೀಗಾಗಿ ಆ ಕಾಲಕ್ಕೆ ಗಂಡಂದಿರು ತಮ್ಮ ತಮ್ಮ ಹೆಂಡಂದಿರಿಗೆ ಗಡಗಡ ನಡುಗುತ್ತಿದ್ದರು ! ರೊಟ್ಟಿ ತಟ್ಟಿದ ಕೈ ಜಗತ್ತನ್ನೇ ಕುಟ್ಟಬಲ್ಲದು ! ಈಗ ವಿಜಾಪುರದಲ್ಲೂ ಹೆಂಗಸರು ಜೋಳದ ಹಿಟ್ಟನ್ನು ಚಪಾತಿಯಂತೆ ಲಟ್ಟಿಸುತ್ತಾರೆಂಬ ಭಯಂಕರ ಸುದ್ದಿ ಕೇಳಿ ಬೆವರು ಬಂತು. ಇಂಥಾ ಸುಸಂಸ್ಕೃತ ನಾರಿಯರ ಜೊಳ್ಳಜೊಳ್ಳ ರೊಟ್ಟಿಗಳನ್ನು ಹಿಂದೆ ದೆವ್ವಗಳೂ ತಿಂತಿದ್ದಿಲ್ಲ !
ಹದಕಟ್ಟು ರೊಟ್ಟಿ ಹುರಿಕಟ್ಟು ರಟ್ಟಿ.. ಇದೇ ಅವರ ಬದುಕಿನ ಪದಕಟ್ಟು ಆಗಿತ್ತು ! ಹಾಂ.... ಗುಂಡಕಲ್ಲು ಗಂಡನನ್ನು ಬೋಳಗುಂಡ ಮಾಡಬೇಕಾದರೆ ರೊಟ್ಟಿಯೇ ಬೇಕು ! ಆಗಿನ್ನೂ ಬರ್ಶನ್ ದಂತಹ ಬಿಡಾಡಿ ವಲಿ ಬಂದಿರಲಿಲ್ಲ. ಏನಿದ್ದರೂ ನುರಿಪಡಿಯಾಗಿ ಸುಟ್ಟ ಜಿಗುಟು ವಲಿ. ಅದರಲ್ಲಿ ಒಂದು ದೊಡ್ಡವಲಿ, ಇನ್ನೆರಡು ಕುಡಿವಲಿಗಳು. ಕುಡಿವಲಿಗಳ ಮೇಲೆ ಕಾರಬ್ಯಾಳಿ, ಬದ್ನೀಕಾಯಿ ಪಲ್ಲೆ ಕುದಿಸುತ್ತಿದ್ದರು. ಒಲಿಯ ತುಂಬ ಜಾಲೀಕಟ್ಟಿಗಿ ಕೆಂಡ. ಈ ಜಾಲಿಕಟ್ಟಿಗೆಯ ಜೋಡಿ ತೊಗರಿಕಟ್ಟಿಗಿ ಸೇರಿಸಿದರೆ ಬ್ರಹ್ಮಾಂಡದಷ್ಟು ಉರಿ. ಮೊದಲು ನಮ್ಮ ಕುಲವಂತ ನಾರಿಯರು ಈ ಮಣ್ಣಿನ ವಲಿಗಳನ್ನು ತೊಳೆದು, ಆ ವಲಿಗೆ ಅದೇ ವಲಿಯ ಬೂದಿಯನ್ನೇ ಈಬತ್ತಿ ಮಾಡಿ ಹಚ್ಚುತ್ತಿದ್ದರು. ವಲಿಯ ಮೇಲಿಟ್ಟ ಹಂಚಿನಲ್ಲಿ ಅದೇ ಬೂದಿಯಿಂದ 'ಓಂ' ಬರೆಯುತ್ತಿದ್ದರು. ನಿಗಿನಿಗಿ ಉರಿಯಲ್ಲಿ ಪುಟಿದೆದ್ದು ಬಂದ ಆ ಪ್ರಪ್ರಥಮ ರೊಟ್ಟಿ ಅವರ ಹೊಟ್ಟೆಗಲ್ಲ.. ಮಠದ ಬುಟ್ಟಿಗೆ ! ಆ ಮಠದ ಬಸವಣ್ಣೆಪ್ಪ ಮುತ್ಯಾ ನಮ್ಮ ಮನೆಗೆ ಕಂತೀ ಭಿಕ್ಷೆಗೆ ದೊಡ್ಡ ಬಿದಿರಬುಟ್ಟಿ ಹೊತ್ತು ತರುತ್ತಿದ್ದ. ನಮ್ಮ ಮನೆಯ ಮೊದಲ ರೊಟ್ಟಿಯನ್ನು ಅವ್ವ ಆ ಬುಟ್ಟಿಗೆ ''ಶಿವಶಿವಾ .... ಬಸವಾ,'' ಅಂತ ನೀಡುತ್ತಿದ್ದಳು. ಆ ಕಂತೀಭಿಕ್ಷೆಯ ಅಜ್ಜ ಆಗ ಏನು ಮಾಡುತ್ತಿದ್ದ ಗೊತ್ತೇ ? ಅದೇ ಬಿದಿರಿನ ಬುಟ್ಟಿಗೆ ಹಿಂದಿನ ಮನಿಯವರು ಹಾಕಿದ ಹೋಳಿಗೆ ಇಲ್ಲವೆ ಕರಿಗಡಬು ಹೊರತೆಗೆದು ನಾವು ಪುಟಾಣಿಗಳ ಕೈಯಲ್ಲಿ ಕೊಡುತ್ತಿದ್ದ. ರೊಟ್ಟಿಕೊಟ್ಟು ಹೋಳ್ಗಿ ಪಡೆಯುತ್ತಿದ್ದೆವು.... ಎಂಥಾ ಖುಶಿ ! ಇನ್ನು ಆ ಗಂಡ.... ಉಂಡಾಡಿ ಗುಂಡ ! ರೊಟ್ಟಿ ಕಂಡರೆ ಬೆಲ್ಲದ ಮಾಗುಂಡ ! ಖಬರು ಹಾರಿ ರೊಟ್ಟಿರುಚಿ ನೋಡುತ್ತಿದ್ದ .
ಹುಬ್ಬಳ್ಳಿ, ಧಾರವಾಡ, ಕಲಬುರಗಿ ವಿಜಾಪುರ, ಬಾಗಲಕೋಟೆ,ಗದಗ, ಕೊಪ್ಪಳ, ರೋಣ, ಗುಲಬರ್ಗಾದ ರೊಟ್ಟಿನಾಡಿದ ಗಟ್ಟಿರಟ್ಟೆಯ ಜಟ್ಟಿ ನಾರಿಯರು ತಮ್ಮ ಚಿಕ್ಕಿಬಳೆಗಳನ್ನು ಕೈಯ ಕಣಕಟ್ಟಿಗೆ ಏರಿಸಿ, ದಪದಪ ಕೊಡಮಿಗಿಯ ತುಂಬ ಬಡಿಯುತ್ತಿದ್ದರು. ಆ ಸಪ್ಪಳ ಮಗ್ಗಲ ಮನಿಗೆ ನಿವ್ಳಾಗಿ ಕೇಳುತ್ತಿತ್ತು. ಆಗ ಮಗ್ಗಲ ಮನಿಯ ಗಂಗಮ್ಮಜ್ಜಿ ಮೆಲ್ಕ ಬಂದು ಹಿತ್ತಲ ಬಾಗಿಲಕ್ಕೆ ಕುಂಡ್ರುತ್ತಿದ್ದಳು. ಅವಳಿಗೆ ಅವ್ವ ಬಿಸೇರೊಟ್ಟಿಯಲ್ಲಿ ಸುಟ್ಟ ಬದ್ನೀಕಾಯಿಯ ಭರತ ಹಚ್ಚಿ, ಮೇಲೆ ನೆಂಚಿಕೊಳ್ಳಲು ಕರಿಂಡಿ ಹಚ್ಚಿ ; ಅದರ ಮೇಲೆ ಕುಸುಬಿ ಎಣ್ಣಿ ಸುರೂತಿದ್ದಳು. ಆ ಮುದಿಕಿ.... ''ನಿನ್ನ ಮನೀತುಂಬ ಪಾರೋದ್ದೇವಿ ತೊಟ್ಲಾ ತೂಗ್ಲೇ ತಾಯಿ.... ಮನೀತುಂಬ ಮಕ್ಳಳ ಬಳ್ಳಿ ಹಬ್ಲಿ....'' ಅಂತ ಹರಕಿಹಾಕುತ್ತಿದ್ದಳು. ಗಂಗಮ್ಮಜ್ಜಿಯ ಹರಕಿಯೋ ಏನೋ ನಾವು ಹತ್ತುಜನ ಉಂಡಾಡಿಗುಂಡರು ಹಾಗೂ ಲೆಕ್ಕವಿಲ್ಲದಷ್ಟು ಮೊಮ್ಮಕ್ಳು -ಗಿರಿಮೊಮ್ಮಕ್ಕಳು ಹುಟ್ಟಿಬಂದೆವು ! ಬುರುಬುರು ಉಬ್ಬಿದ ಬಿಸೇರೊಟ್ಟಿಯಲ್ಲಿ ರಂಜಕ, ಅಗಸಿಹಿಂಡಿ, ಕೆನಿಮಸರು, ಪುಂಡಿಪಲ್ಲೆ, ಮಡಕಿ ಉಸುಳಿ, ಚಳ್ಳಕಾಯಿ ಉಪ್ಪಿನಕಾಯಿ ಹಚ್ಚಿ ಉಣತೊಡಗಿದರೆ ಎದುರಿಗೆ ಶಿವಾ ಪ್ರತ್ಯಕ್ಷ ಆಗಿಬಂದ್ರೂ ಗೊತ್ತಾಗುತ್ತಿದ್ದಿಲ್ಲ.
ಹೊಟ್ಟೇ ತುಂಬ ಹಸಿವು, ರಟ್ಟೆ ತುಂಬ ಕಸುವು! ಅದು ಫ್ಯಾಶನ್ನಿಗಾಗಿ ಸ್ಪೂನು- ಫೋರ್ಕು ಕಡ್ಡಾಡಿಸಿ ಉಣ್ಣುವ ಕಾಲ ಆಗಿರಲಿಲ್ಲ. ಕಬರು ಹಾರಿ ಕೂಳು ತಿನ್ನುವ ಲೀಲೆ ಆಗಿತ್ತು. ಹುರಿಮೀಸೆಯಲ್ಲಿ ಕುಲುಕುಲು ನಗುವ ಗಂಡ ಒಂದುಸಲ ರೊಟ್ಟಿನೋಡಿದರೆ; ಇನ್ನೊಂದು ಸಲ ತನ್ನ ಹೇಂತಿಯ ಗಂಗಾಳ ಅಗಲದ ಗುಂಡುಮುಖ ನೋಡುತ್ತಿದ್ದ. ''ಆರಿದ್ದ ರೊಟ್ಟಿ ಆರಮಂದೀಗೆ, ಬಿಸೇರೊಟ್ಟಿ ಮೂರಮಂದಿಗೆ,''.... ಅಂತ ಅವ್ವ ಹೇಳುತ್ತಿದ್ದಳು. ರೊಟ್ಟಿ ತಿನ್ನುತಿದ್ದಂತೆಯೇ ಒಂದು ಸುಡುಸುಡು ರೊಟ್ಟಿಗೆ ಮಾವಿನಕಾಯಿ ಉಪ್ಪಿನಕಾಯಿಯ ಚಟ್ಟ ಹಾಗೂ ಕುಸಬಿ ಎಣ್ಣಿ ಕಲಿಸಿ; ಕೈಯಲ್ಲೇ ಆ ರೊಟ್ಟಿ ಚಕಚಕ ನಾದಿ, ಉಂಡಿಮಾಡಿ ಅವ್ವ ಕೊಡುತ್ತಿದ್ದಳು. ಇದು ''ಮುಟಿಗಿ ರೊಟ್ಟಿ'' ಅಂತ ಕಲಬುರಗಿ,ಹುಬ್ಬಳ್ಳಿ-ವಿಜಾಪುರಗಳಲ್ಲಿ ಸುಪ್ರಸಿದ್ಧ ! ಈಗ ಈ ಮುಟಿಗಿ ರೊಟ್ಟಿ ತಿನ್ನುವವರು ಹೋದರು.... ಇಲಿಮರಿಯಂಥಾ ಚಾಕಲೇಟ ಚೀಪುವವರು ಬಂದರು ! ಈಗ ಮುಟಿಗಿಯೂ ಹೋತು ! ಕಟಿಗಿಯೂ ಹೋತು ! ಚಟಿಗಿ ತುಂಬಿದ ತುಪ್ಪವೂ ಹೋತು !
*ಪ್ರೋ. ಜಿ. ಹೆಚ್. ಹನ್ನೆರಡುಮಠ ಅವರ ಲೇಖನ.*
ಅನುಭವದ ಕಥೆ
ಬ್ಯಾಂಕ್ ಒಂದರಲ್ಲಿ ದರೋಡೆ ನಡೆದಿತ್ತು. ದರೊಡೆಕೋರ ಕೂಗಿ ಹೇಳಿದ ಯಾರೂ ಅಲ್ಲಾಡಬೇಡಿ,
*" ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ, ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು"*.
ಇದನ್ನು ಮ್ಯಾನೇಜ್ಮೆಂಟ್ ನಲ್ಲಿ *"ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್"* ಎನ್ನುತ್ತಾರೆ...
ಅಂದ್ರೆ ಯೋಚಿಸುವ ರೀತಿಯಲ್ಲಿ ವಿಶೇಷತೆ.
ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು...
ಒಬ್ಬ ಮಹಿಳೆ ಮಾತ್ರ ಸರಿಯಾಗಿ ಮಾತು ಕೇಳಲಿಲ್ಲ, ಆಗ ಆ ದರೊಡೆಕೋರ ಹೇಳಿದ *ಸರಿಯಾಗಿ ನಡೆದುಕೊ ಇಲ್ಲಿ ದರೋಡೆ ನಡೆಯುತ್ತಿದೆ ರೇಪ್ ಅಲ್ಲ*....
ಇದನ್ನು *ಬೀಯಿಂಗ್ ಪ್ರೊಫೆಷನಲ್ ಅಂತಾರೆ*
ಅಂದರೆ ಮಾಡಬೇಕಾದ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು,ಬೇರೆ ಪ್ರಚೋದನೆಗೆ ಒಳಗಾಗದಿರುವುದು.
ದರೋಡೆ ಮುಗಿದು ಮನೆಗೆ ಮರಳಿದಾಗ *ಸಣ್ಣ ಕಳ್ಳ ಹೆಚ್ಚು ಓದಿದ್ದ* ಅವನು ಕದ್ದ ಹಣ ಎಷ್ಟಿದೆ ಅಂತ ಎನಿಸೋಣ ಅಂದ, *ದೊಡ್ಡ ಕಳ್ಳ 6 ನೆ ಕ್ಲಾಸ್ ಓದಿದ್ದ* ಅವನಂದ ಇಷ್ಟೊಂದು ದುಡ್ಡು ಎಣಿಸೋಕೆ ಪೂರ್ತಿ ದಿನ ಬೇಕು ಅದರ ಬದಲು ರಾತ್ರಿ ನ್ಯೂಸ್ ನೋಡಿದ್ರೆ ಅವ್ರೇ ಹೇಳ್ತಾರೆ ಎಷ್ಟಿದೆ ಅಂತ ಅಂದ... ಇದು ಅನುಭವ *Expeerience ಈಗಿನ ಕಾಲಕ್ಕೆ ಅಗತ್ಯವಾಗಿರುವ ಗುಣ.*
ಇದಾದನಂತರ ಬ್ಯಾಂಕ್ ಮ್ಯಾನೇಜರ್ superviser ಗೆ ಹೇಳಿದ ಪೊಲೀಸ್ ಗೆ ಫೋನ್ ಮಾಡೋಣ ಅಂತ, ಆಗ superviser ಹೇಳಿದ ತಡೆಯಿರಿ ಅದಕ್ಕೂ ಮೊದಲು ನಾವು ಈಗಾಗಲೇ ಸ್ವಂತಕ್ಕೆ 70 ಲಕ್ಷ ಬಳಸಿಕೊಂಡಿದ್ದೇವೆ ಅದರ ಜೊತೆ ಇನ್ನೂ 10 ಲಕ್ಷ ತೆಗೆದುಕೊಂಡು ಅಮೇಲೇ ಪೊಲೀಸ್ ಕರೆಸಿದ್ರೆ ಒಳ್ಳೆದು.
ಇದನ್ನು *ಸ್ವಿಮ್ ವಿಥ್ ದ ಟೈಡ್* ಅಂದ್ರೆ ಅಲೆಯ ದಿಕ್ಕಿನಲ್ಲಿ ಈಜುವುದು ಅಂತ...
ಕೆಟ್ಟ ಪರಿಸ್ಥಿತಿಗಳನ್ನೂ ನಮ್ಮ ಅನುಕೂಲವಾಗುವಂತೆ ಪರಿವರ್ತಿಸುವುದು ಅಂತ.
ಮರುದಿನ ನ್ಯೂಸ್ ನಲ್ಲಿ ಬ್ಯಾಂಕ್ ನಿಂದ 1 ಕೋಟಿ ಹಣ ದರೋಡೆ ಅಂತ ಸುದ್ದಿ ಬಂತು...
ಕಳ್ಳರು 10 ಬಾರಿ ಎಣಿಸಿದರೂ ಇದ್ದಿದ್ದು 20 ಲಕ್ಷ ಮಾತ್ರ...ಅವರಿಗೆ ಅರಿವಾಗಿದ್ದೀನಂದ್ರೆ ನಾವು ಪ್ರಾಣ ಪಣಕ್ಕಿಟ್ಟು 20 ಲಕ್ಷ ಕದ್ದೆವು ಆದ್ರೆ ಬ್ಯಾಂಕ್ superviser ಏನೂ ಕಷ್ಟ ಪಡದೆ 80 ಲಕ್ಷ ಗಳಿಸಿದ....
ಒಬ್ಬ ಕಳ್ಳ ನಾಗುವುದಕ್ಕಿಂತ Educated ಆಗುವುದು ಉತ್ತಮ ಆಯ್ಕೆ....
*Knowledge is as worth as gold....*
ಈ ಪ್ರಪಂಚದಲ್ಲಿ ಜ್ಞಾನ ಕ್ಕಿಂತ ಬೆಲೆ ಬಾಳುವ ಶಕ್ತಿ...ಯಾವುದೂ ಇಲ್ಲ😝
ನಿಮ್ಮ ಆಲೋಚನಾಶಕ್ತಿಯೇ ನಿಮ್ಮ ಸಂಪತ್ತು
ಒಂದು ಶಾಲೆಯಲ್ಲಿ ಎಂದಿನಂತೆ ಪಾಠಗಳು ನೆಡೆದಿದ್ದವು. ಹೊರಗೆ ಜೋರಾಗಿ ಮಳೆ ಬರುತ್ತಿತ್ತು. 4ನೇ ತರಗತಿಯ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು. ನಿಮ್ಮೆಲ್ಲರಿಗೂ ನಾನು 100, 100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ? ಎಂದು ಪ್ರಶ್ನಿಸಿದರು.
ಒಬ್ಬ ವಿದ್ಯಾರ್ಥಿ, ನಾನು ವಿಡಿಯೋ ಗೇಮ್ ಖರೀದಿಸುತ್ತೇನೆ ಎಂದ. ಇನ್ನೊಬ್ಬ ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ ಎಂದು ಹೇಳಿದ. ಮತ್ತೊಬ್ಬ ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ ಎಂದ. ಬೇರೆಯೊಬ್ಬ ನಾನು ಚಾಕೊಲೇಟ್ಗಳನ್ನು ಖರೀದಿಸುತ್ತೇನೆ ಎಂದು ಹೇಳಿದ. ಆದರೆ ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು. ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು "ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ?" ಎಂದು ಕೇಳಿದರು.
ಆ ಮಗು ಕನ್ನಡಕ ಖರೀದಿಸುವೇ ಎಂದು ಹೇಳಿದಾಗ, ಶಿಕ್ಷಕರು "ಕನ್ನಡಕನ....ಯಾಕೆ ನಿನಗೆ" ಎಂದಾಗ ಆ ಹುಡುಗ ಸಾರ್, ನನ್ನ ತಾಯಿಗೆ ಸ್ವಲ್ಪ ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!ಎಂದು ಹೇಳಿದಾಗ ಮತ್ತೆ ಶಿಕ್ಷಕರು "ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದಲ್ಲ, ಅವರಲ್ಲಿ ಹೇಳು. ನೀನು ನಿನಗಾಗಿ ಏನನ್ನೂ ಖರೀದಿಸಬೇಕಲ್ಲವೇ ಈ 100 ರೂಪಾಯಿಯಲ್ಲಿ?" ಎಂದು ಕೇಳಿದರು.
ಮಗು "ನನ್ನ ತಂದೆ ಈಗ ಈ ಜಗತ್ತಿನಲ್ಲಿಲ್ಲ ನನ್ನ ತಾಯಿಯೇ ನನಗೆ ಎಲ್ಲ. ನನ್ನ ತಾಯಿ ಊರ ಜನರ ಬಟ್ಟೆ ಹೊಲಿದು ಬರುವ ಸಂಪಾದನೆಯಿಂದ ನನಗೆ ಊಟ, ಬಟ್ಟೆ, ಶಾಲೆಗೆ ಹೋಗಲು ಪುಸ್ತಕ, ಪೆನ್ನು ಕೊಡಿಸುತ್ತಳೆ. ಕೆಲವು ತಿಂಗಳುಗಳಿಂದ ಅವಳು ದೃಷ್ಟಿ ಹೀನತೆಯಿಂದ ಬಟ್ಟೆಯನ್ನು ಸರಿಯಾಗಿ ಹೊಲಿಯಲು ಪರದಡುತ್ತ ಇದ್ದಾಳೆ, ಅದಕ್ಕಾಗಿಯೇ ನಾನು ನನ್ನ ತಾಯಿಗೆ ಕನ್ನಡಕವನ್ನು ನೀಡುತ್ತೇನೆ. ಯಾಕಂದ್ರೆ, ನಾನು ಕೊಡಿಸುವ ಕನ್ನಡಕ್ಕದಿಂದ ನನ್ನ ತಾಯಿ ನನ್ನನು ಚೆನ್ನಾಗಿ ಓದಿಸುತ್ತಳೆ ಎಂಬ ನಂಬಿಕೆಯಿಂದ ಮತ್ತು ನನ್ನ ತಾಯಿಯ ಸಹಾಯದಿಂದ ನಾನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿ ಆದ್ರೂ ಆಗಬಹುದು" ಎಂದು ಮಗು ನೀಡಿದ ಉತ್ತರದಿಂದ ಶಿಕ್ಷಕರ ಕಣ್ಣು ತುಂಬಿಬಂದಿತು.
ಶಿಕ್ಷಕರು "ಶಭಾಷ್ ಪುಟ್ಟ ನಿನ್ನ ಆಲೋಚನೆಯೇ ನಿನ್ನ ಸಂಪಾದನೆ. ತಗೋ ಈ 100 ರೂ. ನನ್ನ ಕೊಟ್ಟ ಭರವಸೆಯ ಮಾತಿನಂತೆ ಮತ್ತು ನಾನು ಇನ್ನು ಈ 200 ರೂಗಳನ್ನು ಸಾಲವಾಗಿ ನೀಡುತ್ತಿದ್ದೇನೆ. ನೀನು ದೊಡ್ಡ ವ್ಯಕಿಯಾಗಿ ಹಣ ಗಳಿಸಿದಾಗ ಈ 200 ರೂಗಳನ್ನು ಹಿಂತಿರುಗಿಸು. ನೀನು ಅಂತಹ ದೊಡ್ಡ ಮನುಷ್ಯನಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾ ಆ ವಿದ್ಯಾರ್ಥಿಯ ತಲೆಯ ಮೇಲೆ ಕೈಯನ್ನು ಇಟ್ಟು ಆಶೀರ್ವದಿಸಿಸುತ್ತ 300 ಕೊಟ್ಟರು.
30 ವರ್ಷಗಳ ನಂತರ, ಹೊರಗೆ ಮಳೆ ಬರುತ್ತಿದೆ, ಒಳಗೆ ತರಗತಿ ನಡೆಯುತ್ತಿದೆ. ಅದೇ ಶಿಕ್ಷಕರು ಇನ್ನು ತನ್ನ ನಿವೃತ್ತಿಯ ಕಡೆಯ 3 ತಿಂಗಳು ಎದುರುನೋಡುತ್ತ, ಯೋಚಿಸುತ್ತ ಪಾಠ ಮಾಡುತ್ತಿದ್ದರು. ಏಕಾಏಕಿ ಶಾಲೆಯ ಮುಂದೆ ಜಿಲ್ಲಾಧಿಕಾರಿಗಳ ಕೆಂಪು ಬಣ್ಣದ ದೀಪಾದ ಸೈರನ್ ಬತ್ತಿಯ ವಾಹನ ಬಂದು ನಿಂತಿತ್ತು. ಶಾಲಾ ಸಿಬ್ಬಂದಿ ಆಶ್ಚರ್ಯರಾದರು. ಶಾಲೆಯಲ್ಲಿ ಮೌನ.
ನೇರವಾಗಿ ಜಿಲ್ಲಾಧಿಕಾರಿ ತರಗತಿಯಲ್ಲಿ ಪಾಠ ಮಾಡುತಿದ್ದ ಮುದುಕ ಶಿಕ್ಷಕರ ಕಾಲಿಗೆ ಬಿದ್ದು "ಸಾರ್, ನಾನು ಸಾಲವಾಗಿ ಪಡೆದ 200 ರೂಪಾಯಿಯನ್ನು ಹಿಂದಿರುಗಿಸಲು ಬಂದಿದ್ದೇನೆ" ಇಡೀ ಶಾಲೆಯ ಸಿಬ್ಬಂದಿ ಬೆಚ್ಚಿಬಿದ್ದರು. ಆ ವಯಸ್ಸಾದ ಶಿಕ್ಷಕರ ಕಾಲಿಗೆ ಬೀಳಲು ಬಾಗುತ್ತಿರುವ ಆ ಯುವಕನ್ನು ಗುರುತಿಸಿ ಮೇಲೆ ಎತ್ತುತ್ತ ಅಪ್ಪಿಕೊಂಡು ತೋಳುಗಳಲ್ಲಿ ಅಳುತ್ತಾ ನನ್ನ ಶಿಕ್ಷಕ ವೃತ್ತಿ ಸಾರ್ಥಕವಾಯಿತು ಎಂದು ಹೇಳುತ್ತಾರೆ.
(ಇದು ಮಹಾರಾಷ್ಟ್ರದ ಜಿಲ್ಲಾಧಿಕಾರಿಗಳ ನಿಜ ಜೀವನದಲ್ಲಿ ನಡೆದ ಸತ್ಯ ಘಟನೆ.)
ನೀತಿ :-- ಕಾಲ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಚಕ್ರವರ್ತಿಯ ಮಗ ಫಕೀರನಾಗುತ್ತಾನೆ, ಮತ್ತು ಫಕೀರನ ಮಗ ಚಕ್ರವರ್ತಿಯಾಗುತ್ತಾನೆ. ಒಳ್ಳೆಯ ಗುರು ಒಳ್ಳೆಯ ಗುರಿ ಇರಬೇಕು ಅಷ್ಟೇ..
ಸರ್.ಎಂ.ವಿ
ವಿದೇಶದಲ್ಲಿ ಆ ರೈಲು ಅತೀ ವೇಗದಲ್ಲಿ ಚಲಿಸುತ್ತಿತ್ತು. ರೈಲಿನ ಕಂಪಾರ್ಟ್ಮೆಂಟಿನ ತುಂಬಾ ಬ್ರಿಟಿಷರೇ ತುಂಬಿದ್ದರು. ಅದೇ ರೈಲಿನ ಕಂಪಾರ್ಟ್ಮೆಂಟಿನ ಒಂದು ಸೀಟಿನಲ್ಲಿ ಭಾರತೀಯರೊಬ್ಬರೂ ಸಹ ಕುಳಿತಿದ್ದರು.
ಕಂಪಾರ್ಟ್ಮೆಂಟಿನಲ್ಲಿದ್ದ 'ಆ ಬಿಳಿಯರ' ಒಂದು ಗುಂಪು ಸೇರಿಕೊಂಡು ಆ ಭಾರತೀಯನನ್ನೇ ನೋಡುತ್ತಿದ್ದರು. ಅವರ ಭಾರತೀಯ ವೇಷಭೂಷಣಗಳನ್ನು ನೋಡಿ ಹಳ್ಳಿ ಮುಕ್ಕನೆಂದು ಅಪಹಾಸ್ಯ, ಗೇಲಿ ಮಾಡುತ್ತಿದ್ದರು. ಈ ಕಂಪಾರ್ಟ್ಮೆಂಟಿನಲ್ಲಿ ಯಾವುದೋ ವಿಚಿತ್ರ ಪ್ರಾಣಿ ಕೂತಿದೆ ಅದನ್ನು ಓಡುತ್ತಿರುವ ಈ ರೈಲಿನಿಂದಲೇ ಹೊರಗೆಸೆಯಿರಿ ಎಂದು ಕೆಲವರು ಹೇಳುತ್ತಿದ್ದರು.
ಗರಿಗರಿಯಾದ ಕಪ್ಪು ಕೋಟು, ಪ್ಯಾಂಟು, ತಲೆಗೆ ಪೇಟ ಧರಿಸಿದ್ದ ಆ ಶಿಸ್ತುಬದ್ಧ ಭಾರತೀಯ ವ್ಯಕ್ತಿಗೆ, ಆ ಬಿಳಿಯರು ಅಷ್ಟೆಲ್ಲಾ ಕುಚೋದ್ಯ ಮಾಡುತ್ತಿದ್ದರೂ, ಅವರ ಮೇಲೆ ಅದು ಯಾವ ಪರಿಣಾಮವನ್ನೂ ಬೀರಲಿಲ್ಲ. ಅವರು ತುಂಬಾ ಶಾಂತ ಗಂಭೀರ ಮನೋಭಾವದಿಂದ ತಮ್ಮ ಆಸನದಲ್ಲಿ ಕುಳಿತಿದ್ದರು.
ರೈಲು ಅತೀ ವೇಗದಲ್ಲಿ ಓಡುತ್ತಿತ್ತು ಮತ್ತು ಆ ಬಿಳಿಯರು ಆ ಭಾರತೀಯನನ್ನು ಅಪಹಾಸ್ಯ ಮಾಡುವುದು ಮತ್ತು ಅಪಮಾನಿಸುವುದು ಮುಂದುವರೆದಿತ್ತು. ಆಗ ಇದ್ದಕ್ಕಿದ್ದಂತೆ ಆ ವ್ಯಕ್ತಿ ತಾವು ಕುಳಿತಿದ್ದ ಸೀಟಿನಿಂದ ಒಮ್ಮೆಲೇ ಎದ್ದು "ರೈಲು ನಿಲ್ಲಿಸಿ" "ರೈಲು ನಿಲ್ಲಿಸಿ" ಎಂದು ಜೋರಾಗಿ ಕೂಗಿದರು. ಅವರು ಕೂಗಿದ್ದು ಅವರಾರಿಗೂ ಅರ್ಥವಾಗಲಿಲ್ಲ. ಕೂಡಲೇ ಅವರು ಮಾಡಿದ ಮೊದಲ ಕೆಲಸ ರೈಲು ನಿಲ್ಲಲು ರೈಲಿನಲ್ಲಿದ್ದ ಚೈನ್ ನ್ನು ಜೋರಾಗಿ ಎಳೆದರು. ಆಗ ರೈಲು ನಿಂತಿತು.
ಈಗ ಆ ಬಿಳಿಯರ ಕೋಪ ಭುಗಿಲೆದ್ದಿತು. ನಿಘಂಟಿನಲ್ಲಿದ್ದ ಪದಗಳೆನ್ನೆಲ್ಲ ಬಳಸಿ ಎಲ್ಲರೂ ಅವರನ್ನು ನಿಂದಿಸುತ್ತಿದ್ದರು. ಇದ್ಯಾವುದೂ ಅವರ ಮೇಲೆ ಏನೂ ಪರಿಣಾಮ ಬೀರುತ್ತಿರಲಿಲ್ಲ. ಅವರ ಆ ಮೌನವು ಬಿಳಿಯರ ಕೋಪವನ್ನು ಇನ್ನೂ ಹೆಚ್ಚಿಸಿತ್ತು.
ಅದೇ ಸಮಯಕ್ಕೆ ಅವರು ಕುಳಿತಿದ್ದ ರೈಲಿನ ಕಂಪಾರ್ಟ್ಮೆಂಟಿನ ಬಳಿ ರೈಲಿನ ಗಾರ್ಡ್ ಓಡಿ ಬಂದ. ಇಲ್ಲಿ "ರೈಲು ನಿಲ್ಲಿಸಿದವರು ಯಾರು" ಎಂದು ಕಟುವಾದ ಧ್ವನಿಯಲ್ಲಿ ಕೇಳಿದ.
ಅಲ್ಲಿದ್ದ ಬಿಳಿಯರು ಮಾತನಾಡುವ ಮೊದಲೇ, ಆ ವ್ಯಕ್ತಿ "ನಾನು ರೈಲನ್ನು ನಿಲ್ಲಿಸಿದೆ ಸಾರ್" ಎಂದು ಹೇಳಿದರು.
ಆ ಭಾರತೀಯನನ್ನು ನೋಡಿದ ರೈಲಿನ ಗಾರ್ಡ್ ಕಟುವಾದ ಧ್ವನಿಯಲ್ಲಿ ನೀನೇನು ಹುಚ್ಚನೇ ? ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವೆಯಾ? ನಿನಗೆ ಗೊತ್ತಾ... ವಿನಾಕಾರಣ ರೈಲನ್ನು ನಿಲ್ಲಿಸುವುದು ಅಪರಾಧ ಎಂದು ಕೋಪದಿಂದ ಹೇಳಿದ"
ಅದಕ್ಕೆ ಅವರು, ಹೌದು ಮಹನಿಯರೇ - ಅದು ನನಗೆ ಗೊತ್ತಿದೆ. ಈಗ ನಾನು ರೈಲನ್ನು ನಿಲ್ಲಿಸದೇ ಹೋಗಿದ್ದರೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದರು.
ಆ ವ್ಯಕ್ತಿಯ ಮಾತು ಕೇಳಿ ಕಂಪಾರ್ಟ್ಮೆಂಟಿನಲ್ಲಿದ್ದ ಎಲ್ಲರೂ ಜೋರಾಗಿ ನಗತೊಡಗಿದರು. ಆದರೆ ಅವರು ವಿಚಲಿತರಾಗದೆ ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳಿದರು - ಇಲ್ಲಿಂದ ಸುಮಾರು ಒಂದು ಫರ್ಲಾಂಗ್ ದೂರದಲ್ಲಿ ರೈಲು ಹಳಿಗಳು ಮುರಿದುಹೋಗಿವೆ, ನೀವು ಬೇಕಾದರೆ ನಡೆದು ಹೋಗಿ ನೋಡಬಹುದು ಎಂದರು.
ಆ ವ್ಯಕ್ತಿಯೂ ಆ ಕಂಪಾರ್ಟ್ಮೆಂಟಿನಿಂದ ಕೆಳಗಿಳಿದರು ಮತ್ತು ಕೆಲವು ಬಿಳಿಯರೂ ಸಹ ಗಾರ್ಡ್ ಜೊತೆಯಲ್ಲಿ ಆ ದಿಕ್ಕಿನತ್ತ ಹೆಜ್ಜೆ ಹಾಕಿದರು. ದಾರಿಯಲ್ಲಿಯೂ ಸಹ, ಆ ಬಿಳಿಯರು ಅವರತ್ತ ಮಾತಿನ ಬಾಣಗಳನ್ನು ಬಿಡುತ್ತಿದ್ದರು. ಇದ್ಯಾವುದೂ ಅವರ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಅವರು ಮೌನವಾಗಿ ಹೆಜ್ಜೆ ಹಾಕುತ್ತಿದ್ದರು.
ಸ್ವಲ್ಪ ದೂರ ಕ್ರಮಿಸಿದ ಮೇಲೆ , ಅಲ್ಲಿಗೆ ಸ್ವಲ್ಪ ದೂರದಲ್ಲೇ ರೈಲು ಹಳಿಯ ಸುತ್ತಲೂ ಟ್ರ್ಯಾಕ್ ಮುರಿದುಹೋಗಿರುವುದನ್ನು ಎಲ್ಲರ ಕಣ್ಣುಗಳು ನೋಡಿದವು. ರೈಲು ಹಳಿಯ ನಟ್-ಬೋಲ್ಟ್‌ಗಳು ಸಂಪೂರ್ಣವಾಗಿ ಬಿಚ್ಚಿಕೊಂಡಿದ್ದವು. ಈಗ ಆ ಭಾರತೀಯನನ್ನು ಮೂರ್ಖ, ಅಜ್ಞಾನಿ, ಹುಚ್ಚು ಎಂದು ಕರೆಯುತ್ತಿದ್ದ ಗಾರ್ಡ್ ಸೇರಿದಂತೆ ಎಲ್ಲಾ ಬಿಳಿಯರ ಮುಖಗಳು ಆ ಭಾರತೀಯನನ್ನೇ ನೋಡಲಾರಂಭಿಸಿದವು. ಎಲ್ಲರಿಗೂ ಕುತೂಹಲ! ನಮ್ಮ ಜೊತೆಯಲ್ಲೇ ಪ್ರಯಾಣಿಸುತ್ತಿದ್ದ ಇವರಿಗೆ ಇಷ್ಟೇ ದೂರದಲ್ಲಿ ರೈಲು ಹಳಿ ಮುರಿದುಹೋಗಿರುವುದೆಲ್ಲಾ ಹೇಗೆ ತಿಳಿಯಿತು..?? ಎಂದು ಎಲ್ಲರೂ ಆಶ್ಚರ್ಯಪಟ್ಟರು.
ಆಗ ರೈಲಿನ ಗಾರ್ಡ್ ಕೇಳಿದ - ಮಹನೀಯರೇ , ಇಲ್ಲಿ ಟ್ರ್ಯಾಕ್ಸ್ ಮುರಿದುಹೋಗಿದೆ ಎಂದು ನಿಮಗೆ ಹೇಗೆ ಗೊತ್ತಾಯಿತು??
ಅವರು ಹೇಳಿದರು - ಸರ್, ಜನರು ರೈಲಿನಲ್ಲಿ ತಮ್ಮ ತಮ್ಮಲ್ಲೆ ಮಾತನಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ಆ ಸಮಯದಲ್ಲಿ ನನ್ನ ಗಮನವು ಓಡುತ್ತಿದ್ದ ರೈಲಿನ ವೇಗದ ಮೇಲೆ ಕೇಂದ್ರೀಕೃತವಾಗಿತ್ತು. ರೈಲು ಸಾಮಾನ್ಯ ವೇಗದಲ್ಲಿ ಚಲಿಸುತ್ತಿತ್ತು. ಆದರೆ ಹಠಾತ್ ಕಂಪನದಿಂದ ರೈಲಿನ ವೇಗದಲ್ಲಿ ಬದಲಾವಣೆಯಾಗಿದ್ದು ನನ್ನ ಅರಿವಿಗೆ ಬಂದಿತು. ಇದು ಸ್ವಲ್ಪ ದೂರದಲ್ಲಿ ಟ್ರ್ಯಾಕ್ ಮುರಿದಾಗ ಸಂಭವಿಸುವ ಶಬ್ದವಾದ್ದರಿಂದ ನಾನು ಒಂದು ಕ್ಷಣವನ್ನೂ ವ್ಯರ್ಥಮಾಡದೇ ರೈಲನ್ನು ನಿಲ್ಲಿಸಲು ಸರಪಳಿಯನ್ನು ಎಳೆದಿದ್ದೇನೆ ಎಂದರು.
ಅವರಾಡಿದ ಮಾತುಗಳನ್ನು ಅಲ್ಲಿ ನಿಂತಿದ್ದ ಕಾವಲುಗಾರರು ಮತ್ತು ಅವರನ್ನು ಅಪಹಾಸ್ಯ ಮಾಡಿದ್ದ ಬಿಳಿಯರು ಕೇಳಿ ದಿಗ್ಭ್ರಮೆಗೊಂಡರು. ಆ
ಗಾರ್ಡ್ ಮತ್ತೆ ಕೇಳಿದ - ಎಂತಹ ಉತ್ತಮ ತಾಂತ್ರಿಕ ಜ್ಞಾನ ನಿಮ್ಮದು! ನೀವು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿಲ್ಲ. ದಯವಿಟ್ಟು ನಿಮ್ಮ ಪರಿಚಯ ಮಾಡಿಕೊಡಿ ಎಂದು ವಿನಯವಾಗಿ ಕೇಳಿದನು.
ಆ ವ್ಯಕ್ತಿ ತುಂಬಾ ನಯವಾಗಿ ಉತ್ತರಿಸಿದರು - ಸರ್ ನಾನು ಭಾರತೀಯ ಇಂಜಿನಿಯರ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದರು.
ಹೌದು ! ಆ ಅಸಾಧಾರಣ ವ್ಯಕ್ತಿ ಬೇರೆ ಯಾರೂ ಅಲ್ಲ, ನಮ್ಮ ಹೆಮ್ಮೆಯ ಭಾರತರತ್ನ ಮೋಕ್ಷಗುಂಡಂ ಡಾ.ವಿಶ್ವೇಶ್ವರಯ್ಯನವರು.
ಇಂದು ಭಾರತ ಕಂಡ ಮಹಾನ್ ಅಭಿಯಂತರರು ಕರ್ಮಯೋಗಿ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನ. ಅವರಿಗೆ ನಮ್ಮೆಲ್ಲರಿಂದ ಶತ ಶತ ನಮನಗಳು.
ಮನ ಕಲಕುವ ಘಟನೆ
ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ ಹಿಡಿದು ಕೊಂಡಿದ್ದರು. ಅವರನ್ನು ಗಮನಿಸಿದರೆ, ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವ ಹಾಗನಿಸಿತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, "ಇದು ಆನಂದ್ ಅವರ ಮನೇನಾ, ಯೋಗಾನಂದ ರಸ್ತೇನಾ" ಅಂತ ಕೇಳಿದರು.
"ಹೌದು ನಾನೇ ಆನಂದ್, ಇದೇ ನೀವು ಹುಡುಕುತ್ತಿರುವ ವಿಳಾಸ", ತಾವು ಯಾರು ಎಂದು ಬಡಬಡಿಸಿದೆ. ಅವರ ಕೈಗಳು ನಡುಗುತ್ತಾ ಇದ್ದವು, ತುಟಿ ಒಣಗಿತ್ತು, ನಾಲಿಗೆಯಿಂದ ತುಟಿ ಸವರುತ್ತಾ, ಅವರು ಒಂದು ಪತ್ರವನ್ನು ನನಗೆ ಕೊಡುತ್ತಾ ಹೀಗೆಂದರು:
"ನಾನು ನಿಮ್ಮ ತಂದೆಯ ಸ್ನೇಹಿತ. ನಿಮ್ಮ ಹಳ್ಳಿಯಿಂದ ಬರುತ್ತಿದ್ದೇನೆ. ನಿಮ್ಮ ತಂದೆಯವರು ಈ ಪತ್ರವನ್ನು ನಿಮಗೆ ತಲುಪಿಸಿ, ನನ್ನ ಮಗ ನಿಮಗೆ ಸಹಾಯ ಮಾಡುತ್ತಾನೆ" ಎಂದು ತಿಳಿಸಿದರು.
ನಾನು ಆಶ್ಚರ್ಯದಿಂದ "ತಂದೆಯವರ" ಎಂದು ಕೇಳಿದೆ. ನಾನು ಪತ್ರವನ್ನು ಓದಿದೆ. " ಪ್ರೀತಿಯ ಆನಂದ, ನಿನಗೆ ಆಶೀರ್ವಾದಗಳು. ಈ ಪತ್ರವನ್ನು ನಿನಗೆ ಕೊಡುತ್ತಾ ಇರುವವರು ನನ್ನ ಸ್ನೇಹಿತರು. ಇವರ ಹೆಸರು ರಾಮಯ್ಯ. ಬಹಳ ಪ್ರಾಮಾಣಿಕ ವ್ಯಕ್ತಿ. ಕೆಲವು ದಿನಗಳ ಹಿಂದೆ ಇವರ ಒಬ್ಬನೇ ಮಗ ರಸ್ತೆ ಅಪಘಾತದಲ್ಲಿ ಸತ್ತುಹೋದ. ಇವರು ಅಪಘಾತಕ್ಕೆ ಸಿಗುವ ಪರಿಹಾರವನ್ನು ಪಡೆಯಲು ಒಪ್ಪಿರಲಿಲ್ಲ. ನಾನೇ ಅವರನ್ನು ಒತ್ತಾಯಿಸಿ ಪರಿಹಾರ ಪಡೆಯಲು ಒಪ್ಪಿಸಿದೆ. ಪರಿಹಾರದ ಹಣ ಅವರ ಮತ್ತು ಪತ್ನಿಯ ಜೀವನಕ್ಕೆ ಆಧಾರವಾಗುತ್ತೆ. ಅವರಿಗೆ ಬೇರೆ ಯಾವ ಆದಾಯವೂ ಜೀವನ ನಡೆಸಲು ಸಾಕಾಗುವದಿಲ್ಲ. ಅಪಘಾತಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳನ್ನು ಕಳಿಸಿದ್ದೇನೆ. ಅವರ ಮಗ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯ ಕಚೇರಿ ಹೈದರಾಬಾದ್ ನಲ್ಲಿದೆ. ಮತ್ತು ಇವರು ಹೈದರಾಬಾದಿಗೆ ಎಂದೂ ಬಂದವರಲ್ಲ. ಅವರಿಗೆ ನೀನು ಸಹಾಯ ಮಾಡುವೆ ಎಂದು ನಂಬಿರುತ್ತೇನೆ.
ನಿನ್ನ ಆರೋಗ್ಯವನ್ನು
ನೋಡಿಕೋ. ಸಮಯ ಸಿಕ್ಕಾಗ ಬಂದು ನಮ್ಮನ್ನು ಭೇಟಿ ಮಾಡು. ಇಂತಿ, ನಿನ್ನ ಪ್ರೀತಿಯ ತಂದೆ".
ರಾಮಯ್ಯನವರು ನನ್ನನ್ನೇ ನೋಡುತ್ತಾ ಇದ್ದರು. ಒಂದು ಕ್ಷಣ ಯೋಚಿಸಿದ ಮೇಲೆ, ಅವರನ್ನು ಒಳಗೆ ಕರೆದೆ. ಕುಡಿಯಲು ನೀರು ಕೊಟ್ಟು, ಏನಾದ್ರೂ ತಿಂದಿದ್ದೀರಾ ಎಂದು ಕೇಳಿದೆ. ಇಲ್ಲಾ ಎಂದರು. ನಾನೇ ದೋಸೆ ಮಾಡಿ, ಉಪ್ಪಿನಕಾಯಿ ಜೊತೆ ತಿನ್ನಲು ಕೊಟ್ಟೆ. ನಾನು ಒಳಗೆ ಹೋಗಿ ಕೆಲವರಿಗೆ ಫೋನ್ ಮಾಡಿ ಬಂದೆ. ಅಷ್ಟರಲ್ಲಿ ಅವರು ದೋಸೆ ತಿಂದು ಮುಗಿಸಿದ್ದರು.
ಅವರು ಕೆಲವು ಕಾಗದ ಪತ್ರಗಳನ್ನು ನನಗೆ ಕೊಡುತ್ತಾ, ಅವರ ಮಗ ಸತ್ತುಹೋದ ಬಗ್ಗೆ ತಿಳಿಸುತ್ತಾ ಮಗನ ಫೋಟೋ ಒಂದು ಕೊಟ್ಟರು. 22 ವರ್ಷದ ಮುದ್ದಾದ ಹುಡುಗ. ನನ್ನ ಕಣ್ಣುಗಳು ತೇವವಾದವು. ಅವರು ಮುಂದುವರಿಸುತ್ತಾ "ನನ್ನ ಒಬ್ಬನೇ ಸಂತಾನ, ಮಹೇಶ ಅಂತ. ಚೆನ್ನಾಗಿ ಓದಿದ, ಒಳ್ಳೇ ಕೆಲಸ ಸಿಕ್ಕಿತು. ನಮ್ಮ ಜೀವನದ ಕೊನೆಯಲ್ಲಿ ನಮಗೆ ಆಸರೆಯಾಗುವ ಭರವಸೆ ಕೊಟ್ಟ. ಆದರೆ ರಸ್ತೆ ಅಪಘಾತದಲ್ಲಿ ಸತ್ತೋದ. ನಿಮ್ಮ ತಂದೆಯವರ ಒತ್ತಾಯದ ಮೇಲೆ ಪರಿಹಾರದ ಹಣ ಪಡೆಯಲು ಬಂದಿದ್ದೇನೆ. ನನಗೂ ವಯಸ್ಸಾಯಿತು, ನನ್ನ ಹೆಂಡತಿಗೆ ಆರೋಗ್ಯ ಸಮಸ್ಯೆ ಇದೆ." ಎಂದು ಹೇಳಿ ಮುಗಿಸಿದರು.
ಬೆಳಗ್ಗೆ ಎದ್ದು, ಹೋಟೆಲ್ ನಲ್ಲಿ ಟಿಫಿನ್ ಮಾಡಿ ಅವರನ್ನು ಮುಖ್ಯ ಆಫೀಸ್ ಬಳಿ ಕರೆದೊಯ್ದೆ. ಆಗ ಅವರು, "ನೀನು ನಿನ್ನ ಆಫೀಸ್ ಗೆ ಹೋಗಿ ಬಾರಪ್ಪ, ತುಂಬಾ thanks ಎಂದರು." ಇಲ್ಲಾ ನಾನು ಈ ದಿನ ರಜ ಹಾಕಿದ್ದೇನೆ. ನಿಮ್ಮ ಕೆಲಸ ಮುಗಿಯುವ ವರೆಗೂ ಜೊತೆಗೆ ಇರುತ್ತೇನೆ ಎಂದೆ.
ಸಂಜೆ ಅಷ್ಟೊತ್ತಿಗೆ ಅವರಿಗೆ ಪರಿಹಾರದ ಚೆಕ್ ಸಿಕ್ಕಿತು. ನನಗೆ ವಂದನೆ ತಿಳಿಸುತ್ತಾ, ಪತ್ನಿ ಒಬ್ಬಳೇ ಹಳ್ಳಿಯಲ್ಲಿ ಇದ್ದಾರೆ, ನಾನು ಈಗ ಹಳ್ಳಿಗೆ ವಾಪಸ್ಸು ಹೋಗುತ್ತೇನೆ ಎಂದರು. ಬನ್ನಿ ನಾನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಆಟೋ ಹತ್ತಿದೆವು. ಬಸ್ಸಿನ ಟಿಕೆಟ್ ತೆಗೆದು ಕೊಟ್ಟೆ, ದಾರಿಯಲ್ಲಿ ತಿನ್ನಲು ಸ್ವಲ್ಪ ಹಣ್ಣುಗಳನ್ನು ತೆಗೆದು ಕೊಟ್ಟೆ. ಅವರು ಕಣ್ಣೀರು ಹಾಕುತ್ತಾ, "ಆನಂದ್ ನಿಮ್ಮಿಂದ ನನಗೆ ಬಹಳ ಉಪಕಾರ ಆಯಿತು. ಇದೆಲ್ಲವನ್ನೂ ನಾನು ನಾಳೆ ನಿನ್ನ ತಂದೆಗೆ ತಿಳಿಸಿ ಅವರಿಗೂ ಧನ್ಯವಾದ ಹೇಳುತ್ತೇನೆ" ಎಂದರು.
ಆಗ ನಾನು :
"ಹಿರಿಯರೇ, ನಾನು ನಿಮ್ಮ ಸ್ನೇಹಿತರ ಮಗ ಆನಂದ ಅಲ್ಲ, ನನ್ನ ಹೆಸರು ಅರವಿಂದ. ನೀವು ತಪ್ಪು ವಿಳಾಸಕ್ಕೆ ಬಂದಿದ್ದಿರಿ. ನೀವು ಕೇಳಿದ ವಿಳಾಸ ಇನ್ನೂ 2 km. ದೂರ ಇತ್ತು. ನೀವು ಅದಾಗಲೇ ಸುಸ್ತಾಗಿದ್ದಿರಿ, ಕತ್ತಲು ಆಗಿತ್ತು. ನಿಮ್ಮನ್ನು ಮತ್ತೆ 2 km. ದೂರ ನಡೆಸಲು ನನಗೆ ಮನಸ್ಸಾಗಲಿಲ್ಲ. ನಾನೇ ಆನಂದ್ ಅಂತ ಹೇಳಿಬಿಟ್ಟೆ." ಎಂದು ತಿಳಿಸಿದೆ.
ನಂತರ ನಿಮ್ಮ ಮಗನ ಬಗ್ಗೆ ಹೇಳಿದಾಗ ನನ್ನ ಮನಸ್ಸಿಗೆ ಬಹಳ ಖೇದವಾಯಿತು. ನೀವು ಕಳೆದುಕೊಂಡ ಮಗನನ್ನು ನೀವು ಮತ್ತೆ ಪಡೆಯಲು ಸಾಧ್ಯವಿಲ್ಲ. ಅದನ್ನು ಅರಿತು ನಿಮಗೆ ನನ್ನ ಕೈಲಾದ ಸಹಾಯ ಮಾಡಿದೆ. ಇದರಿಂದ ನನ್ನ ಮನಸ್ಸಿಗೂ ತೃಪ್ತಿ ಆಯಿತು.
ಅಷ್ಟರಲ್ಲಿ ಬಸ್ ಹೊರಟಿತು. ಅವರು ನನ್ನ ಕೈ ಹಿಡಿದು "ವಂದನೆಗಳು ಮಗುವೇ, ದೇವರು ನಿನಗೆ ಒಳ್ಳೆಯದು ಮಾಡಲಿ" ಎಂದರು.
ನನ್ನ ತಂದೆಯವರು ತೀರಿಹೋಗಿ 15 ವರ್ಷಗಳು ಆಗಿತ್ತು. ರಾಮಯ್ಯ ಅವರನ್ನು ನೋಡಿದಾಗ, ನನ್ನ ತಂದೆಯವರು ವಾಪಸ್ಸು ಬಂದಿದ್ದಾರೆ ಎನ್ನಿಸಿತು. "ತಂದೆ, ನೀವು ಈ ರೀತಿಯಲ್ಲಿ ಬಂದು, ನಾನು ಸಹಾಯ ಮಾಡುತ್ತೀನೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಿದಿರಾ?" ಎಂದು ಆಕಾಶ ನೋಡಿ ಒಮ್ಮೆ ಕೇಳಿದೆ.
"ನಿಮ್ಮಂತಹ ಒಳ್ಳೆಯ ತಂದೆಗೆ ಮಗನಾಗಿ ಹುಟ್ಟಿದ ನಾನು ನನ್ನ ಕರ್ತವ್ಯವನ್ನು ಮಾಡಲು ಹೇಗೆ ಮರೆಯಲಿ, ತಂದೆ ನಿಮಗೆ ಸಂತೋಷ ಆಯಿತೇ" ಎಂದು ಕೇಳುತ್ತಾ ಇರುವಾಗ ನನಗೆ ತಿಳಿಯದ ಹಾಗೇ ಕಣ್ಣಲ್ಲಿ ಕಣ್ಣೀರು ಸುರಿಯಿತು.
************************************************
ಬರ್ನ್ ಆದ ಬಲ್ಬುಗಳು.
ಗೆಳೆಯರೇ,
ಒಬ್ಬ ದೊಡ್ಡ executive ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ನಿವೃತ್ತನಾದ. ಇದು ಸಹಜ, ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದಲೇ ಬೇಕು.
ನಿವೃತ್ತಿಯ ಮುನ್ನ ಈ ಅಧಿಕಾರಿ ಅರಮನೆಯಂತಹ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ. ಈಗ apartment ಒಂದರಲ್ಲಿನ ತನ್ನದೇ ಸ್ವಂತ flat ಗೆ ಬಂದು ನೆಲೆಸಿದ. ಅದೊಂದು cluster of apartments. ಎಲ್ಲ ಸೌಕರ್ಯಗಳೂ ಇದ್ದುವೆಂದು ಹೇಳುವ ಅಗತ್ಯವಿಲ್ಲ.
ಈ ನಿವೃತ್ತ ಅಧಿಕಾರಿ ತನ್ನನ್ನು ತಾನೇ ತುಂಬಾ ದೊಡ್ಡ ವ್ಯಕ್ತಿಯೆಂದು ಭಾವಿಸಿದ್ದ. ಅಲ್ಲಿನ ಯಾವ ವ್ಯಕ್ತಿಯೊಂದಿಗೂ ಮಾತನಾಡುತ್ತಿರಲಿಲ್ಲ, ಯಾರ ಸ್ನೇಹವನ್ನೂ ಮಾಡಿಕೊಳ್ಳಲು ಇಚ್ಛಿಸುತ್ತಿರಲಿಲ್ಲ.
ಒಂದು ಅಂತರ ಕಾಯ್ದುಕೊಂಡೇ ಬಂದ.
ಸಾಯಂಕಾಲದ ಸಮಯದಲ್ಲಿ community parkನಲ್ಲಿ ನಡೆದಾಡುವಾಗಲೂ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಉಳಿದವರ ಕಡೆ ಒಂದು ರೀತಿ ತಿರಸ್ಕಾರ ನೋಟ ಬೀರುತ್ತಿದ್ದ. ತನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದ.
ಹೀಗೆ ಕಾಲ ಕಳೆಯುತ್ತಿತ್ತು. ಒಂದು ದಿನ ಸಂಜೆ ಈ ವ್ಯಕ್ತಿ ಬೆಂಚೊಂದರಲ್ಲಿ ಕುಳಿತಿದ್ದಾಗ ಈತನಿಗಿಂತಲೂ ವಯಸ್ಸಾದ ವೃದ್ಧರೊಬ್ಬರು ಈತನ ಪಕ್ಕದಲ್ಲಿ ಬಂದು ಕುಳಿತರು. ಆ ವೃದ್ಧರೇ ಈ ವ್ಯಕ್ತಿಯೊಂದಿಗೆ ಮಾತನಾಡಲು ಆರಂಭಿಸಿದರು. ಅಧಿಕಾರಿ ಮೊದಮೊದಲು ಬಿಗುಮಾನದಿಂದಲೇ ಮಾತನಾಡತೊಡಗಿ, ನಂತರ ಸ್ವಲ್ಪ ಸ್ವಲ್ಪವಾಗಿ ತೆರೆದುಕೊಳ್ಳಲಾರಂಭಿಸಿದ. ಮಾತುಗಳನ್ನು ಮುಂದುವರೆದವು, ಕ್ರಮೇಣ ಅವರಿಬ್ಬರೂ ನಿತ್ಯವೂ ಭೇಟಿಯಾಗಲಾರಂಭಿಸಿದರು. ಇವರ ಮಾತುಕತೆಯ ವಿಷಯ ಬೇರೇನೂ ಇರಲಿಲ್ಲ. ಅಧಿಕಾರಿಯ ಸ್ವ ಪ್ರಶಂಸೆಯ ಮಾತುಗಳೇ ಆಗಿರುತ್ತಿದ್ದವು. ಆತನಿಗೆ ತನ್ನ ಕಳೆದ ದಿನಗಳ ಬಗ್ಗೆ ಹೇಳಿಕೊಳ್ಳುವುದು ಬಲು ಆಪ್ಯಾಯಮಾನವಾಗಿರುತ್ತಿತ್ತು.
ಆತ ಆ ವೃದ್ಧರೊಂದಿಗೆ ಹೇಳಿಕೊಳ್ಳುತ್ತಿದ್ದ - " ನಿವೃತ್ತಿಯ ಮುನ್ನ ನಾನು ಎಷ್ಟು ಉನ್ನತ ಹುದ್ದೆಯಲ್ಲಿದ್ದೆ ಗೊತ್ತೇ ? ನೀವು ಊಹಿಸಲೂ ಸಾಧ್ಯವಿಲ್ಲ. ಈಗ ವಿಧಿಯಿಲ್ಲದೆ ಇಲ್ಲಿ ಬಂದು ನೆಲಸಬೇಕಾಗಿದೆ ". ಇತ್ಯಾದಿ ಇತ್ಯಾದಿ.
ಆ ವೃದ್ಧರು ಶಾಂತವಾಗಿ ಈತನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು.
ಹೀಗೇ ಇನ್ನಷ್ಟು ದಿನ ಕಳೆಯಿತು. ಈ ನಿವೃತ್ತ ಅಧಿಕಾರಿ ಇತರರ ಬಗ್ಗೆ ಕುತೂಹಲದಿಂದ ವೃದ್ಧರೊಂದಿಗೆ ವಿಚಾರಿಸತೊಡಗಿದ. ಇಷ್ಟು ದಿನಗಳು ಶಾಂತವಾಗಿ ಕೇಳಿಸಿಕೊಳ್ಳುತ್ತಲೇ ಇದ್ದ ವೃದ್ಧರು ಬಾಯಿ ತೆರೆದರು.
" ನಿವೃತ್ತಿಯ ನಂತರ ನಾವೆಲ್ಲರೂ fuse ಹೋದ ಬಲ್ಬಿನಂತೆ. ಈ ಬಲ್ಬುಗಳು ಮುಂಚೆ ಯಾವ wattageನವಾಗಿದ್ದವು ಎಂದು ಯೋಚಿಸುವುದು ಅರ್ಥಹೀನ. Fuse ಹೋದ ನಂತರ ಹಿಂದೆ ಈ ಬಲ್ಬುಗಳು ಎಷ್ಟು wattageನದಾಗಿದ್ದವು ? ಎಷ್ಟು ಬೆಳಕು ಕೊಡುತ್ತಿದ್ದವು ? ಇದಕ್ಕೆ ಬೆಲೆಯಿದಯೇ "?
ವೃದ್ಧರು ಮುಂದುವರೆಸಿದರು -
" ನಾನು ಈ community ವಸತಿಯಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದೇನೆ. ನಾನು ಇದುವರೆಗೆ ಈ ಹಿಂದೆ ಎರಡು ಅವಧಿಗಳಿಗೆ ಲೋಕಸಭಾ ಸದಸ್ಯನಾಗಿದ್ದೆ ಎಂದು ಯಾರಲ್ಲಿಯೂ ಹೇಳಿಕೊಳ್ಳಲು ಹೋಗಲಿಲ್ಲ.
ಅಲ್ಲಿ, ಆ ಬೆಂಚಿನ ಮೇಲೆ ಕುಳಿತಿದ್ದಾರಲ್ಲಾ, ಅವರ ಹೆಸರು ವರ್ಮಾಜಿ ಎಂದು. ಅವರು ಇಂಡಿಯನ್ ರೈಲ್ವೇಸ್ ನ ನಿವೃತ್ತ ಜನರಲ್ ಮ್ಯಾನೇಜರ್.
ಅಲ್ಲಿ, ದೂರದಲ್ಲಿ ನಡೆದು ಬರುತ್ತಿದ್ದಾರಲ್ಲಾ, ಸರ್ದಾರ್ ಜಿ ಅವರು ಆರ್ಮಿಯಲ್ಲಿ ಮೇಜರ್ ಜನರಲ್ ಆಗಿದ್ದವರು.
ಅಲ್ಲಿ ಈ ಕಡೆ ಅತಿ ಶುಭ್ರವಾದ ಬಿಳಿ ಬಟ್ಟೆ ಧರಿಸಿ ಕುಳಿತಿರುವರಲ್ಲಾ, ಮೆಹ್ತಾಜಿ ಅವರು ಇಸ್ರೊದಲ್ಲಿ Chief ಆಗಿದ್ದರು. ಅವರು ಈ ವಿಷಯವನ್ನು ಇದುವರೆಗೆ ಯಾರೊಂದಿಗೂ ಹೇಳಿಕೊಂಡಿಲ್ಲ. ನನಗೆ ಹೇಗೋ ತಿಳಿಯಿತು.
ಈಗ ಇವರೆಲ್ಲರೂ fuse ಹೋದ ಬಲ್ಬುಗಳು. Zero watt ನಿಂದ 100 watt ವರೆಗೆ ಏನಾಗಿದ್ದರೋ, ಅದು ಈಗ ಪ್ರಸ್ತುತವೇ ಅಲ್ಲ. ಅಥವಾ ಅವರೇನು cfl, led, halogen, incandescent, fluorescent decorative ಬಲ್ಬುಗಳಾಗಿದ್ದವೋ, ಅದೂ ವಿಷಯವಲ್ಲ.
ಅಯ್ಯಾ ಗೆಳೆಯ, ಇದು ನಿನಗೂ ಅನ್ವಯವಾಗುತ್ತದೆ. ಈ ವಿಷಯ ನಿನಗೆ ಯಾವಾಗ ಅರ್ಥವಾಗುತ್ತದೆಯೋ, ಆಗ ನಿನ್ನ ಮನಸ್ಸು ಪ್ರಶಾಂತವಾಗುತ್ತದೆ ಈ ಸಮುಚ್ಚಯದಲ್ಲಿದ್ದುಕೊಂಡೂ ನೀನು ಪ್ರಚ್ಛನ್ನನಾಗುತ್ತೀಯೆ.
ನಂತರ ಮುಂದುವರೆಸಿದರು -
" ಸೂರ್ಯೋದಯ ಮತ್ತು ಸೂರ್ಯಾಸ್ತ , ಎರಡೂ ಸುಂದರ ದೃಶ್ಯಗಳೇ. ಆದರೆ ನಾವು ಉದಯರವಿಗೆ ನೀಡುವಷ್ಟು ಮಹತ್ವವನ್ನು ಮುಳುಗುವ ಸೂರ್ಯನಿಗೆ ನೀಡುವುದಿಲ್ಲ. ಈ ಸತ್ಯವನ್ನು ನೀನು ಅರಿತುಕೊಳ್ಳಬೇಕು.
ನಮಗೆ ಯಾವ ಹುದ್ದೆ, ಬಿರುದು ಬಾವಲಿಗಳು ಇರುತ್ತವೆಯೋ ಅವು ಯಾವುವೂ ಶಾಶ್ವತವಲ್ಲ. ಇವುಗಳಿಗೆ ಹೆಚ್ಚಿನ ಮಹತ್ವ ಕೊಟ್ಟರೆ, ನಾವು ಜೀವನದ ಸುಖ ಶಾಂತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ, ಜೀವನ ದುರ್ಭರವಾಗುತ್ತದೆ. ಇವು ಯಾವುವೂ ನಮ್ಮ ಜೊತೆಗೆ ಬರುವುದಿಲ್ಲ.
ಒಂದು ವಿಷಯ ಜ್ಞಾಪಕದಲ್ಲಿಟ್ಟುಕೋ.
ಚದುರಂಗದಾಟ ಮುಗಿದ ನಂತರ, ಎಲ್ಲ ಕಾಯಿಗಳು (pawns) ರಾಜ, ಮಂತ್ರಿ ಸಹಿತ ಎಲ್ಲವೂ ಒಂದೇ ಡಬ್ಬಿಯನ್ನು ಸೇರುತ್ತವೆ.
*🌻ದಿನಕ್ಕೊಂದು ಕಥೆ🌻*
*ಅಮಾಯಕರ ಬಲಿ*
ಒಬ್ಬ ಚಕ್ರವರ್ತಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರ ನಡುವಣ ಅಂತರ ಕೇವಲ ಒಂದೂವರೆ ವರ್ಷ. ಅಂತರ ಕಡಿಮೆ ಇದ್ದಾಗ ಜಗಳಗಳು ಬರುವುದು ಸಹಜ. ರಾಣಿಗೆ, ಸೇವಕರಿಗೆ ಇವರಿಬ್ಬರ ನಡುವಣ ಜಗಳವನ್ನು ಪರಿಹರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ದಿನಗಳು ಕಳೆದಂತೆ ಈ ಜಗಳ ಮತ್ತಷ್ಟು ಹೆಚ್ಚಾಗುವಂತೆ ತೋರಿತು. ಅದಕ್ಕೇ ರಾಜ ಯೋಚಿಸಿ ಒಂದು ಉಪಾಯ ಮಾಡಿದ. ಮಕ್ಕಳು ಹದಿನೆಂಟು ವಯಸ್ಸಿನವರಾಗುತ್ತಿದ್ದಂತೆ ತನ್ನ ದೇಶವನ್ನು ಎರಡು ಸಮಾನ ಭಾಗಗಳನ್ನಾಗಿ ಮಾಡಿ ಇಬ್ಬರನ್ನೂ ಒಂದೊಂದು ದೇಶಕ್ಕೆ ರಾಜನನ್ನಾಗಿ ಮಾಡಿಬಿಟ್ಟ. ಅವರ ಪಟ್ಟಾಭಿಷೇಕಕ್ಕೆ ಮೊದಲು ಇಬ್ಬರನ್ನೂ ಕರೆದು ಹೇಳಿದ, ‘ಮಕ್ಕಳೇ, ಬಾಲ್ಯದಿಂದ ನಿಮ್ಮ ನಡುವಣ ಜಗಳವನ್ನು ಗಮನಿಸಿದ್ದೇನೆ. ಹುಡುಗುತನದ ಈ ಜಗಳವೇನೋ ಸರಿ, ಆದರೆ ನೀವೀಗ ರಾಜರು. ಇನ್ನು ನೀವು ಹೊಡೆದಾಡದೆ ನಿಮ್ಮ ನಿಮ್ಮ ರಾಜ್ಯಗಳಲ್ಲಿ ಸುಖವಾಗಿರಬೇಕು. ನಿಮ್ಮ ಶಕ್ತಿಗಳನ್ನು ಬಳಸಿಕೊಂಡು ರಾಜ್ಯಗಳನ್ನು ಸಮೃದ್ಧ ಮಾಡಿಕೊಳ್ಳಿ ’. ಮಕ್ಕಳು ಒಪ್ಪಿದರು. ತಂದೆ ಕಾಡಿಗೆ ಹೋಗಿ ಅಲ್ಲಿಯೇ ನೆಲೆಸಿದರು. ತಾಯಿ ಹಿರಿಯ ಮಗನ ಹತ್ತಿರ ಉಳಿದರು. ಅಣ್ಣತಮ್ಮಂದಿರು ತಂದೆ ಮಾತಿನಂತೆ ಶಾಂತವಾಗಿಯೇ ಉಳಿದರು. ಮುಂದಿನ ನಲವತ್ತು ವರ್ಷಗಳ ಕಾಲ ಇಬ್ಬರೂ ತಮ್ಮ ರಾಜ್ಯಗಳನ್ನು ಬಲಪಡಿಸಿಕೊಂಡರು, ಇಬ್ಬರ ನಡುವಣ ಬಾಂಧವ್ಯ ಆದರ್ಶವೆನ್ನಿಸುವಂತಿತ್ತು.
ಕೆಲ ವರ್ಷಗಳ ನಂತರ ತಮ್ಮನು ತನ್ನ ರಾಜ್ಯಕ್ಕೆ ಒಬ್ಬ ತರುಣ ಮಂತ್ರಿಯನ್ನು ಆಯ್ಕೆ ಮಾಡಿದ. ಆತ ತುಂಬ ಮಹತ್ವಾಕಾಂಕ್ಷಿ ವ್ಯಕ್ತಿ. ದಿನ, ಪ್ರತಿದಿನ ರಾಜನಿಗೆ ರಾಜ್ಯ ವಿಸ್ತಾರ ಮಾಡಲು ಹೇಳತೊಡಗಿದ. ಮೊದಮೊದಲು ಅದನ್ನು ವಿರೋಧಿಸಿದ ರಾಜ ನಂತರ ನಿಧಾನವಾಗಿ ಅದರ ಆಕರ್ಷಣೆಗೆ ಒಳಗಾದ. ಸೈನ್ಯವನ್ನು ಒಗ್ಗೂಡಿಸಿ ಅಣ್ಣನ ರಾಜ್ಯದ ಮೇಲೆ ದಂಡೆತ್ತಿ ಹೋಗಲು ಸಿದ್ಧತೆ ಮಾಡಿಕೊಂಡ. ಅಣ್ಣನಿಗೆ ಈ ವಿಷಯವನ್ನು ನಂಬಲೂ ಆಗಲಿಲ್ಲ. ನಲವತ್ತು ವರ್ಷಗಳ ಕಾಲ ಶಾಂತಿಯಿಂದ ಬದುಕಿದ ಆತನಿಗೆ, ತಮ್ಮ ತನ್ನ ಮೇಲೆ ಯುದ್ದ ಮಾಡಿಯಾನು ಎನ್ನಿಸಿರಲಿಲ್ಲ. ಅವನ ಸೈನ್ಯ ಯುದ್ಧಕ್ಕೆ ಸಿದ್ಧವಾಗಿಯೇ ಇರಲಿಲ್ಲ. ಅವನಿಗಂತೂ ಯುದ್ಧ ಮಾಡುವುದೇ ಮರೆತು ಹೋಗಿದೆ. ಆದರೂ ರಾಜ್ಯದ ಗಡಿಗೆ ವೈರಿಗಳ ಸೈನ್ಯ ಬಂದು ನಿಂತಾಗ ಆತ ಹೊರಡಲೇಬೇಕಲ್ಲ.
ನೆನಪು ಮಾಡಿಕೊಂಡು ಯುದ್ಧದ ಕವಚಗಳನ್ನು ಧರಿಸಿದ. ತಾಯಿಗೆ ಹೇಳಿದ, ‘ಅಮ್ಮ, ಈ ಯುದ್ಧ ಅನಪೇಕ್ಷಿತವಾಗಿ ನನ್ನ ತಲೆಯ ಮೇಲೆ ಬಂದು ಕೂತಿದೆ. ನೀನೇ ಶಸ್ತ್ರಾಗಾರದಿಂದ ನನ್ನ ಶಿರಸ್ತ್ರಾಣವನ್ನು ತಂದು ತಲೆಯ ಮೇಲಿಡು. ಅದೇ ನನ್ನನ್ನು ಕಾಪಾಡಲಿ’. ಅಮ್ಮ ಶಸ್ತ್ರಾಗಾರಕ್ಕೆ ಹೋಗಿ ಶಿರಸ್ತ್ರಾಣವಿಲ್ಲದೇ ಮರಳಿ ಬಂದಳು. ‘ಮಗೂ ನಾನು ಅದನ್ನು ತರಲಾರೆ’ ಎಂದಳು. ‘ಯಾಕಮ್ಮ, ಅದು ಅಷ್ಟು ಭಾರವಾಗಿದೆಯೇ?’ ಎಂದು ಕೇಳಿದ ರಾಜ. ಆಗ ಅಕೆ, ‘ಶಸ್ತ್ರಾಗಾರವನ್ನು ಬಳಸಿಯೇ ಎಷ್ಟೋ ದಿನವಾಯಿತಲ್ಲವೇ? ನಿನ್ನ ಶಿರಸ್ತ್ರಾಣದಲ್ಲಿ ಪಾರಿವಾಳವೊಂದು ತನ್ನ ತೀರ ಪುಟ್ಟದಾದ ಮೂರು ಮರಿಗಳನ್ನಿಟ್ಟು ಕಾಪಾಡುತ್ತಿದೆ. ನಾನು ಹತ್ತಿರ ಹೋದರೆ ತಾಯಿ ಪಕ್ಷಿ ಗಾಬರಿಯಾಗಿ ಹಾರಿಹೋಗುತ್ತದೆ. ಪಾಪ! ಮರಿಗಳು ಸತ್ತು ಹೋಗುತ್ತವೆ. ಅದಕ್ಕೇ ತರಲಿಲ್ಲ’ ಎಂದಳು.
ಮಗ ಶಿರಸ್ತ್ರಾಣವಿಲ್ಲದೇ ಯುದ್ಧಕ್ಕೆ ಹೋದ. ಅಣ್ಣ ಹೀಗೆ ಬಂದದ್ದನ್ನು ನೋಡಿ ತಮ್ಮನಿಗೆ ಆಶ್ಚರ್ಯವಾಯಿತು. ನೇರವಾಗಿ ಬಂದು ಕಾರಣ ಕೇಳಿದ. ಅಣ್ಣ ಸರಳವಾಗಿ ನಡೆದದ್ದನ್ನೇ ತಿಳಿಸಿದ. ತಮ್ಮನಿಗೆ ತನ್ನ ಬಗ್ಗೆಯೇ ಮುಜುಗರವಾಯಿತು. ಮೂರು ಮರಿಗಳ ಪ್ರಾಣವನ್ನು ತೆಗೆಯಲು ಹಿಂಜರಿದ ಅಣ್ಣ ತನ್ನ ಪ್ರಾಣವನ್ನೇ ಪಣವಾಗಿಟ್ಟು ಬಂದಿದ್ದಾನೆ. ಅಮಾಯಕರಾದ ಅಷ್ಟೊಂದು ಜನ ಸೈನಿಕರನ್ನು ಮತ್ತು ದೇವರಂಥ ಅಣ್ಣನನ್ನು ನಾನು ಕೊಲ್ಲಲು ಹೊರಟಿದ್ದೇನೆ. ತನ್ನಂತಹ ಕೃತಘ್ನ ಮತ್ತಾರೂ ಇರಲು ಸಾಧ್ಯವಿಲ್ಲ ಎಂದುಕೊಂಡು ಅಣ್ಣನಿಗೆ ನಮಸ್ಕಾರ ಮಾಡಿ ಯುದ್ಧ ನಿಲ್ಲಿಸಿ ತನ್ನ ಮಂತ್ರಿಯನ್ನು ಮನೆಗೆ ಕಳುಹಿಸಿದ.
ದಿನನಿತ್ಯವೂ ಯುದ್ಧದ ವಿಷಯಗಳನ್ನು ಕೇಳುತ್ತೇವೆ. ಆದರೆ ಇದರಲ್ಲಿ ಸಾಯುವವರು, ನೋಯುವವರು ಯಾರು? ಯುದ್ಧದ ಕ್ರೌರ್ಯವನ್ನು ಮನದಲ್ಲಿ ತುಂಬಿಕೊಂಡು ಇದಕ್ಕೆ ಹೊಂಚು ಹಾಕಿದವರು ಬೆಚ್ಚಗೆ ಕುಳಿತಿರುತ್ತಾರೆ. ಆದರೆ, ಅಮಾಯಕರಾದ ಸೈನಿಕರು, ಗಡಿಯಲ್ಲಿದ್ದ ಪ್ರಜೆಗಳು ಬಲಿಯಾಗುತ್ತಾರೆ. ಈ ಜಗತ್ತಿನಲ್ಲಿ ಎಲ್ಲರಿಗೂ ಸ್ಥಳವಿದೆ, ಬೆಳೆಯಲು ಅವಕಾಶವಿದೆ. ಆದರೆ, ಮತದ ಹೆಸರಿನಲ್ಲಿ, ರಾಜಕೀಯ ಚಿಂತನೆಯ ಹೆಸರಿನಲ್ಲಿ, ಅಹಮಿಕೆಯ ಪ್ರದರ್ಶನದಲ್ಲಿ ರಕ್ತಪಾತವಾಗುತ್ತದೆ. ಇಂಥ ಸಂದರ್ಭದಲ್ಲಿ ನಿರ್ದೋಷಿಯಾದ ಪಾರಿವಾಳದ ಮೂರು ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒಡ್ಡಿದ ರಾಜನ ನೆನಪಾಗಬೇಕು, ಅವನ ಆದರ್ಶ ಮಾದರಿಯಾಗಬೇಕು. ಆದರೆ ರಕ್ತಪಿಪಾಸುಗಳಿಗೆ ಇದನ್ನು ಹೇಳುವವರು ಯಾರು ?
ಸಾಧನೆಯ ಗರ್ವ
ಒಂದು ದಿನ ಬೇಸಿಗೆಯ ಕಾಲದಲ್ಲಿ ಕಾಡಿನ ರಾಜ ಸಿಂಹ ಭರ್ಜರಿ ಬೇಟೆಯಾಡಿ, ಹೊಟ್ಟೆ ತುಂಬ ತಿಂದು ಮರದ ನೆರಳಿನಲ್ಲಿ ಮಲಗಿತ್ತು. ಗಾಢನಿದ್ರೆಯಲ್ಲಿದ್ದ ಸಿಂಹಕ್ಕೆ ಥಟ್ಟನೆ ಎಚ್ಚರವಾಯಿತು. ಇದಕ್ಕೆ ಕಾರಣ ಅದರ ಕಿವಿಯ ಹತ್ತಿರ ಗುಂಯ್‍ಗುಡುತ್ತಿದ್ದ ಒಂದು ನೊಣ.
ಚೆನ್ನಾಗಿ ನಿದ್ರೆ ಮಾಡಬೇಕೆಂದಿದ್ದ ಸಿಂಹಕ್ಕೆ ಭಾರಿ ಕೋಪ ಬಂತು. ನೊಣವನ್ನು ಓಡಿಸಲು ತನ್ನ ಕೇಸರವನ್ನು ಪಟಪಟನೇ ಝಾಡಿಸಿತು. ನೊಣ ಸರ್ರನೇ ಹಾರಿ ಗರಗರನೇ ಸುತ್ತಿ ಬಂದು ಸಿಂಹವನ್ನು ರೇಗಿಸುವಂತೆ ಅದರ ಮೂಗಿನ ಮೇಲೆಯೇ ಕುಳಿತುಕೊಂಡಿತು. ಅದರ ಉದ್ಧಟತನವನ್ನು ಕಂಡು ಸಿಂಹಕ್ಕೆ ಇನ್ನೂ ಸಿಟ್ಟು ಹೆಚ್ಚಾಯಿತು. ತನ್ನ ಬಲಗಾಲನ್ನೆತ್ತಿ ಫಟ್ಟನೇ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು.
ಆದರೆ ಜಾಣ ನೊಣ ಅಲ್ಲಿಂದ ಪಾರಾಗಿ ಮೇಲೆ ಹಾರಿದಾಗ ಸಿಂಹದ ಕಾಲು ಅದರ ಮುಖಕ್ಕೇ ಅಪ್ಪಳಿಸಿ ಭಯಂಕರ ನೋವಾಯಿತು, ಕಣ್ಣಲ್ಲಿ ನೀರು ಬಂದಿತು. ನೊಣ ಗಹಗಹಿಸಿ ನಕ್ಕಿತು, ‘ನೀನೆಂಥ ರಾಜನಯ್ಯ? ನನ್ನಂಥ ಸಣ್ಣ ಪ್ರಾಣಿಯನ್ನು ಹಿಡಿಯಲೂ ಆಗುವುದಿಲ್ಲ’ ಎಂದಿತು. ಈಗ ಸಿಂಹ ಎದ್ದು ನಿಂತು ಹೋರಾಟಕ್ಕೇ ಮುಂದಾಯಿತು.
ನೊಣಕ್ಕೂ ಈ ಯುದ್ಧ ಇಷ್ಟವೇ. ಸುಯ್ಯೆಂದು ಸಿಂಹದ ತಲೆಯನ್ನು ಸುತ್ತುತ್ತ, ಕ್ಷಣಮಾತ್ರದಲ್ಲಿ ಅದರ ಕಣ್ಣಿನ ಹತ್ತಿರ ಬಂದು, ಮತ್ತೆ ಅದರ ಕಿವಿಯಲ್ಲಿ ಸೇರಿ, ಹೊರನುಗ್ಗಿ ತೀರ ಬಾಯಿಯ ಹತ್ತಿರವೇ ಬಂದಿತು. ಅದನ್ನು ಕಚ್ಚಿ ಬಿಡಬೇಕೆಂದು ಸಿಂಹ ಬಾಯ್ತೆರೆದು ಮುನ್ನುಗ್ಗಿದಾಗ, ಮುಂದಿದ್ದ ಮರಕ್ಕೆ ಮುಖ ಜೋರಾಗಿ ಬಡಿದು ಕುಸಿತು ಬಿತ್ತು. ಕೆಳಗೆ ಬಿದ್ದ ಸಿಂಹವನ್ನು ನೋಡಿ ನೊಣಕ್ಕೆ ಭಾರಿ ಮಜವಾಯಿತು. ‘ಹೇ, ಹೇ, ಹೇ, ಎಂಥ ಮಜ ಇದು! ಕಾಡಿನ ರಾಜ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಾನೆ.
ಒಂದು ನೊಣದಿಂದ ಪಾರಾಗುವುದು ಸಾಧ್ಯವಿಲ್ಲ. ನನ್ನ ಶಕ್ತಿ ಎಂಥದ್ದು ತಿಳಿಯಿತೇ? ಎಷ್ಟು ದೊಡ್ಡದು ನಿನ್ನ ದೇಹ? ಏನು ಶಕ್ತಿ ನಿನ್ನ ಕಾಲಿನಲ್ಲಿ? ಎಷ್ಟು ಅಬ್ಬರದ ಘರ್ಜನೆ ನಿನ್ನದು? ನಿನ್ನನ್ನು ಕಂಡರೆ ದೊಡ್ಡ ದೊಡ್ಡ ಪ್ರಾಣಿಗಳು ಹೆದರುತ್ತಾವಂತೆ. ಅವೆಷ್ಟು ಹೇಡಿಗಳಿರಬೇಕು? ಛೇ, ನಿನ್ನ ಶಕ್ತಿ ನನ್ನ ಪುಟ್ಟ ರೆಕ್ಕೆಗಳಿಗೂ ಸಮನಲ್ಲ. ನಿನ್ನಂಥ ಹತ್ತಾರು ಸಿಂಹಗಳನ್ನು ಕ್ಷಣದಲ್ಲಿ ಸೋಲಿಸಬಲ್ಲೆ ನಾನು’ ಹೀಗೆಯೇ ಅದರ ಬಡಾಯಿ ನಡೆದಿತ್ತು.
ಇದರ ಚೆಲ್ಲಾಟವನ್ನು ಮರದ ಮೇಲಿಂದ ಗಮನಿಸುತ್ತಿದ್ದ ಗಿಳಿಯೊಂದು ನೊಣದ ಹತ್ತಿರ ಹಾರಿ ಬಂದು, ‘ಗೆಳೆಯಾ, ನಿನ್ನ ಶಕ್ತಿ ನಿಜವಾಗಿಯೂ ಅದ್ಭುತವೇ. ಆದರೆ, ನನ್ನೊಂದಿಗೆ ಈ ಮರದ ಕೆಳಗಿನ ಕೊಂಬೆಯವರೆಗೆ ಬರುತ್ತೀಯಾ?” ಎಂದು ಕೇಳಿತು. ಈಗ ತಾನೇ ಸಿಂಹವನ್ನು ಸೋಲಿಸಿದ ಅಮಲಿನಲ್ಲಿದ್ದ ನೊಣ ಅದೇ ಅಹಂಕಾರದಿಂದ ಗಿಳಿಯೊಂದಿಗೆ ಹಾರಿತು, ಅದನ್ನೇ ಹಿಂಬಾಲಿಸಿತು.
ಗಿಳಿ ಮೇಲೆ ಹಾರುತ್ತ, ಹಾರುತ್ತ ಸರಕ್ಕನೇ ಬದಿಗೆ ಸರಿಯಿತು. ಅದರ ಹಿಂದೆಯೇ ಸಾಗುತ್ತಿದ್ದ ನೊಣ ಗಮನಿಸದೆ ಮುನ್ನುಗ್ಗಿದಾಗ ಅಲ್ಲಿ ಹರಡಿಕೊಂಡಿದ್ದ ಜೇಡರಬಲೆಗೆ ಸಿಕ್ಕಿಕೊಂಡಿತು. ಏನೆಲ್ಲ ಒದ್ದಾಡಿದರೂ ಪಾರಾಗುವುದು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಜೇಡರ ಹುಳ ತನ್ನ ಬಲೆಯನ್ನು ಬಿಗಿದು ಇದರ ಪ್ರಾಣವನ್ನು ಹೀರ ತೊಡಗಿತು.
ಆಗ ಗಿಳಿ ಹೇಳಿತು. ‘ಅಯ್ಯಾ, ಕಾಡಿನರಾಜ ಸಿಂಹವನ್ನು ಸೋಲಿಸಿದೆ ಎಂದು ಬೀಗುತ್ತಿದ್ದ ನೀನು ಪುಟ್ಟ ಬಲೆಯಿಂದ, ಜೇಡರ ಹುಳದಿಂದ ಪಾರಾಗಲಾರೆ. ಇನ್ನು ನಿನ್ನ ಅಹಂಕಾರಕ್ಕೆ ಅವಕಾಶವಿಲ್ಲ’ ಹೀಗೆ ಹೇಳಿ ಹಾರಿ ಹೋಯಿತು. ಯಾವುದೋ ಪುಣ್ಯವಿಶೇಷದಿಂದ ಕೆಲವೊಮ್ಮೆ ದೊಡ್ಡ ಸಾಧನೆಯಾಗುತ್ತವೆ, ದೊಡ್ಡವರ ಸಾಧನೆ ಸರಿಗಟ್ಟುವ ಅವಕಾಶಗಳು ಬರುತ್ತವೆ.
ಆ ಸಾಧನೆ ನಮ್ಮ ತಲೆ ತಿರುಗಿಸಬಾರದು. ಯಾವಾಗಲೂ ಅದೇ ಮಟ್ಟದ ಸಾಧನೆ ಮಾಡಲು ಸಾಧ್ಯವಾಗದೇ ಹೋಗಬಹುದು. ಹಿಂದಿನ ಸಾಧನೆಯನ್ನೇ ತಲೆಯಲ್ಲಿಟ್ಟುಕೊಂಡು ಗರ್ವಪಡುತ್ತಿದ್ದರೆ ಒಂದಲ್ಲ ಒಂದು ದಿನ ತೀರ ಸಣ್ಣವರಿಂದಲೇ ಸೋಲು ಕಂಡು ಮುಖಭಂಗಪಡುವಂತಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರಾಗುತ್ತೇವೆ.
ಬಸವಣ್ಣನವರು " ಎನಗಿಂತ ಕಿರಿಯರಿಲ್ಲ.ಶಿವಶರಣರಿಗಿಂತ ಹಿರಿಯರಿಲ್ಲ" ಎಂದು ಹೇಳಿದ್ದಾರಲ್ಲವೇ.ಹಾಗಯೇ ಎಂತೆಂತಹ ಜ್ಙಾನಿಗಳು ಏನೆಲ್ಲಾ ಸಾಧಿಸಿದ್ದಾರೆ.ಅವರ ಮುಂದೆ ನಾವೇನು ಮಹಾ! ಸಮಾಜದಲ್ಲಿ ತಗ್ಗಿ ಬಗ್ಗಿ ನಡೆಯೋಣ.ಏನಂತೀರಿ.
*🌻ದಿನಕ್ಕೊಂದು ಕಥೆ🌻
ಏನಾದರೂ ಬಿಟ್ಟು ಹೋಗಿದ್ದಾರೆಯೇ?*
ವಿಚಿತ್ರವೆನಿಸಬಹುದಾದ ಮೇಲಿನ ಶೀರ್ಷಿಕೆಯು ಮೂರು ಘಟನೆಗಳ ನೆನಪು ಮಾಡಿಸುತ್ತದೆ. ಮೂರೂ ಘಟನೆಗಳಲ್ಲಿನ ಪ್ರಶ್ನೆ ಒಂದೇ! ಉತ್ತರ ಮಾತ್ರ ಬೇರೆ-ಬೇರೆ! ಮೊದಲು ಘಟನೆಗಳನ್ನು ನೋಡೋಣ.
ಮೊದಲನೆಯದ್ದು: ಅಮೆರಿಕದ ನಗರ ಸಾರಿಗೆಯ ಬಸ್ಸನ್ನು ಮಹಿಳೆಯೊಬ್ಬರು ಹತ್ತಿದರು. ಚಾಲಕನನ್ನು ಬಸ್ ತಡವಾಗಿ ಏಕೆ ಬಂದಿತೆಂದು ಗದರಿದರು. ಚಾಲಕ ನಸುನಕ್ಕು ಸುಮ್ಮನಾದರು. ಮಹಿಳೆ ಬಸ್ಸಿನಲ್ಲಿ ಖಾಲಿಯಿದ್ದ ಸೀಟೊಂದರಲ್ಲಿ ಕುಳಿತುಕೊಳ್ಳುತ್ತಾ ಪಕ್ಕದಲ್ಲಿದ್ದ ಒಬ್ಬ ಅಜ್ಜಿಯನ್ನು ‘ಬಸ್ಸಿನಲ್ಲಿರುವ ಜನರಿಂದ ದುರ್ವಾಸನೆ ತುಂಬಿದೆ. ಹೇಸಿಗೆಯಾಗುತ್ತದೆ. ಈ ಜನ ಎಷ್ಟು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ? ತಲೆ ಚಿಟ್ಟು ಹಿಡಿಯುತ್ತದೆ.
ಅದಿರಲಿ, ಮುದಿವಯಸ್ಸಿನಲ್ಲಿ ನಿಮಗೆ ಸುತ್ತಾಡುವ ಚಟವೇ? ಮನೆಯಲ್ಲಿ ಕುಳಿತಿರಬಾರದೆ?’… ಎನ್ನುತ್ತಾ ಏನೇನೋ ಮಾತನಾಡಿದರು. ಅಜ್ಜಿ ಮುಜುಗರಗೊಳ್ಳುತ್ತಲೇ ‘ಏನು ಮಾಡಲಿ ಮೇಡಂ, ನನ್ನ ಮಗಳು ಆಸ್ಪತ್ರೆಯಲ್ಲಿದ್ದಾಳೆ. ಅವಳನ್ನು ನೋಡಲು ಹೋಗುತ್ತಿದ್ದೇನೆ. ಅದಕ್ಕಾಾಗಿ ಬಸ್ ಪ್ರಯಾಣ’ ಎಂದರು. ಆದರೂ ಮಹಿಳೆ ಬಸ್ಸಿನಲ್ಲಿ, ಪ್ರಯಾಣಿಕರಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಕಿರುಚಾಡುತ್ತಿದ್ದರು.
ಆಕೆ ಇಳಿಯಬೇಕಾದ ಸ್ಟಾಪ್ ಬಂದಿತು. ಆಕೆ ಇಳಿಯುವಾಗಲೂ ಚಾಲಕನನ್ನು ಕುರಿತು ‘ನೀವು ಓಡಿಸುತ್ತಿರುವುದು ಬಸ್ಸೋ ಅಥವಾ ಕುದುರೆ ಗಾಡಿಯೋ? ನಿಮ್ಮ ನಿಧಾನ ಗತಿ ಅಸಮಾಧಾನವನ್ನುಂಟು ಮಾಡುತ್ತದೆ’ ಎಂದು ಹೇಳುತ್ತಿದ್ದರು. ಆಗ ಚಾಲಕ ‘ಮೇಡಂ, ನೀವು ಬಸ್ಸಿನಿಂದಿಳಿದು ಹೋಗುತ್ತಿದ್ದೀರಿ. ಆದರೆ ಏನನ್ನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು. ಮಹಿಳೆ ಆಶ್ಚರ್ಯಗೊಂಡರು. ತಮ್ಮ ದೊಡ್ಡ ಕೈಚೀಲವನ್ನು ಮುಟ್ಟಿ ನೋಡಿಕೊಂಡರು. ಆಕೆ ‘ನಾನು ಏನನ್ನೂ ಬಿಟ್ಟು ಹೋಗುತ್ತಿಲ್ಲವಲ್ಲಾ! ನಾನು ಏನನ್ನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದರು. ಆಗ ಬಸ್ ಚಾಲಕರು ನಗುನಗುತ್ತಲೇ ‘ಕೆಟ್ಟ ಅನುಭವ’! ಎಂದರು. ಮಹಿಳೆ ಮುಖ ಗಂಟಿಕ್ಕಿಕೊಂಡು ಹೋದರು.
ಎರಡನೆಯ ಘಟನೆ: ಒಂದು ಹೋಟೆಲ್ಲಿಗೆ ವಯೋವೃದ್ಧ ಅಪ್ಪ ಮತ್ತು ಅವರ ಮಧ್ಯ ವಯಸ್ಸಿನ ಮಗ ಬಂದರು. ಮಗನೇ ಒಳ್ಳೆಯ ಮೇಜು-ಕುರ್ಚಿ ಹುಡುಕಿ ತಂದೆಯವರನ್ನು ಕೂರಿಸಿದರು. ತಂದೆಯವರು ಹೇಳಿದ ತಿಂಡಿ-ತಿನಿಸುಗಳನ್ನೇ ತರಿಸಿದರು. ಅದನ್ನು ತಿನ್ನಲು ತಂದೆಗೆ ಸಹಾಯ ಮಾಡಿದರು. ಊಟ ಮುಗಿದ ನಂತರ ತಂದೆಯವರನ್ನು ಕೈಹಿಡಿದು ಎಬ್ಬಿಸಿ ನಿಧಾನವಾಗಿ ಹೊರಕ್ಕೆ ಕರೆದುಕೊಂಡು ಹೋದರು. ಆಗ ಹೋಟೆಲ್ಲಿನಲ್ಲಿ ಕುಳಿತಿದ್ದ ಹಿರಿಯ ಗ್ರಾಹಕರೊಬ್ಬರು ಬಂದು ಮಗನಿಗೆ ‘ನೀವು ಏನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು. ಮಗ ಆಶ್ಚರ್ಯದಿಂದ ‘ಏನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದಾಗ ಹಿರಿಯರು ‘ಮಕ್ಕಳಿಗೆಲ್ಲಾ ಒಳ್ಳೆಯ ಪಾಠವನ್ನು ಬಿಟ್ಟು ಹೋಗುತ್ತಿದ್ದೀರಿ!’ ಎಂದರಂತೆ.
ಮೂರನೆಯ ಘಟನೆ: ಒಬ್ಬ ತಂದೆ ಸತ್ತು ಹೋದರು. ಅವರ ಮಗನಿಗೆ ಸಾಂತ್ವನ ಹೇಳಲು ಅವರ ಸ್ನೇಹಿತರು ಬಂದರು. ಸಂದರ್ಭೋಚಿತವಾದ ಮಾತುಗಳನ್ನಾಡಿದರು. ಆನಂತರ ‘ನಿಮ್ಮ ತಂದೆ ಏನಾದರೂ ಬಿಟ್ಟು ಹೋಗಿದ್ದಾರೆಯೇ?’ ಎಂದು ಕೇಳಿದರು. ಮಗ ‘ಏನನ್ನೂ ಬಿಟ್ಟು ಹೋಗಿಲ್ಲ’ ಎಂದರು. ಆಗ ಸ್ನೇಹಿತರು ‘ಅವರು ಬದುಕಿನಲ್ಲಿ ಬಹಳಷ್ಟು ಹಣವನ್ನು ಗಳಿಸಿದ್ದರಂತೆ?’ ಎಂದು ಕೇಳಿದರು. ಮಗ ‘ನಿಮ್ಮ ಮಾತು ನಿಜ. ಆದರೆ ನಮ್ಮ ತಂದೆ ಹಣ ಗಳಿಸುವ ಅವಸರದಲ್ಲಿ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯವನ್ನು ಮರಳಿ ಗಳಿಸಲು ಹಣವನ್ನೆಲ್ಲಾ ಕಳೆದುಕೊಂಡರು. ಆದರೂ ಸತ್ತು ಹೋದರು. ಹಾಗಾಗಿ ಅವರು ಏನನ್ನೂ ಬಿಟ್ಟು ಹೋಗಿಲ್ಲ’ ಎಂದರಂತೆ.
ಮೊದಲ ಎರಡು ಘಟನೆಗಳನ್ನು ಅಂತರ್ಜಾಲದಲ್ಲಿ ಯಾರೋ ಪುಣ್ಯಾತ್ಮರು ಹಾಕಿದ್ದುದನ್ನು ಓದಿದ್ದು. ಮೂರನೆಯ ಘಟನೆಯನ್ನು ಹಿರಿಯ ವಿದ್ವಾಂಸರಾದ ಡಾ.ಗೊ.ರು.ಚನ್ನಬಸಪ್ಪನವರ ಉಪನ್ಯಾಸವೊಂದರಲ್ಲಿ ಕೇಳಿದ್ದು. ಅವರೆಲ್ಲರಿಗೂ ಪ್ರಣಾಮಗಳು. ನಮ್ಮೆಲ್ಲರ ಬದುಕೂ ಒಂದು ರೀತಿಯ ಬಸ್ ಪ್ರಯಾಣವೇ ಅಲ್ಲವೇ? ನಾವು ನಮ್ಮ ಬದುಕಿನ ಬಸ್ಸಿನಿಂದಿಳಿದು ಹೋಗುವಾಗ ಏನಾದರೂ ಬಿಟ್ಟು ಹೋಗಿದ್ದಾರೆಯೇ? ಎಂದು ಕೇಳಿದರೆ, ಉತ್ತರ ಏನು ಸಿಗಬಹುದು? ಕೆಟ್ಟ ಅನುಭವವೋ? ಒಳ್ಳೆಯ ಪಾಠವೋ? ಅಥವಾ ಏನೂ ಇಲ್ಲವೋ?
*🌻ದಿನಕ್ಕೊಂದು ಕಥೆ🌻*
*ಆತ್ಮ ವಿಶ್ವಾಸವೇ ದೊಡ್ಡ ಶಕ್ತಿ.*
ಒಮ್ಮೆ ಸ್ನೇಹಿತರೆಲ್ಲಾ ಸೇರಿಕೊಂಡು ಹಡಗಿನಲ್ಲಿ ಪ್ರವಾಸ ಹೊರಟಿದ್ದರು. ಇದ್ದಕ್ಕಿದ್ದಂತೆ ಜೋರಾಗಿ ಬಿರುಗಾಳಿ ಎದ್ದು ಸಮುದ್ರದ ಮದ್ಯೆ ಹಡಗು ಮುಗುಚಿಕೊಂಡಿತು. ಹಡಗಿನಲ್ಲಿದ್ದವರೆಲ್ಲಾ ಮೃತ ಪಟ್ಟರು. ಒಬ್ಬ ಮಾತ್ರ ಸಮುದ್ರದಲ್ಲಿ ಸಿಕ್ಕ ಮರದ ಪೆಟ್ಟಿಗೆಯೊಂದನ್ನು ಹಿಡಿದುಕೊಂಡು ಅದರೊಂದಿಗೆ ಕಷ್ಟ ಪಟ್ಟು ತೇಲುತ್ತಾ ಪಾರಾದ. ಆ ಪೆಟ್ಟಿಗೆ ಅವನನ್ನು ತೇಲಿಸುತ್ತಾ ಒಂದು ಪುಟ್ಟ ದ್ವೀಪಕ್ಕೆ ತಂದು ನಿಲ್ಲಿಸಿತು.
ಸುತ್ತಮುತ್ತ ಕಣ್ಣು ಹರಿಸಿದರೆ, ಎಲ್ಲಿ ನೋಡಿದರು ಸಾಗರವೇ. ಅಲ್ಲಿ ಇಲ್ಲಿ ಇದ್ದ, ಮರದ ಕೊಂಬೆ, ಒಣಗಿದ ಹುಲ್ಲು, ಎಲೆಗಳಿಂದ ಅಲ್ಲೇ ಹೇಗೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು, ಅಲ್ಲಿದ್ದ ಹಣ್ಣು ಹಂಪಲುಗಳನ್ನು ತಿಂದು ಹೇಗೋ ಬದುಕಿದ್ದ.
ಎಷ್ಟು ದಿನವೆಂದು ಹೀಗೇ ಒಬ್ಬನೇ ಇರುವುದು? ಯಾವುದಾದರೂ ದೋಣಿ ಅಥವಾ ಹಡಗು ಬರದೇ ಹೋದರೆ ತನ್ನ ಕಥೆ ಏನು? ಅಯ್ಯೋ ನನ್ನ ಗ್ರಹಚಾರವೇ, ಎಂದು ಯಾವಾಗಲೂ ದುಃಖಿಸುತ್ತಿದ್ದ.
ಹೇಗೋ ಸೌದೆಗಳನ್ನು ಒಟ್ಟುಗೂಡಿಸಿಕೊಂಡು, ರಾತ್ರಿ ಸಮಯದಲ್ಲಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದ. ಹಾಗೆಯೇ ,ಈ ಬೆಂಕಿಯನ್ನು ನೋಡಿಯಾದರೂ ಯಾವುದಾದರೂ ಹಡುಗು ತನ್ನನ್ನು ಬದುಕಿಸಲು ಬರಬಹುದೆಂಬ ಆಸೆ ಅವನದು. ಆದರೆ ಅದುವರೆಗೂ ಯಾವ ಹಡಗು ಬರಲಿಲ್ಲ. ತಾನು ಇನ್ನು ಬದುಕುಳಿಯುವುದು ಕಷ್ಟವೆಂದು ಅವನಿಗೆ ಅನ್ನಿಸತೊಡಗಿತು.
ಒಂದು ಸಲ ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ, ನೋಡುತ್ತಾನೆ, ಗುಡಿಸಲಿಗೆ ಹೇಗೂ ಬೆಂಕಿ ತಗುಲಿ , ಗುಡಿಸಲು ಧಗ ಧಗನೇ ಹೊತ್ತಿ ಉರಿಯುತ್ತಿದೆ. ಅಯ್ಯೋ, ಭಗವಂತ ನಾನೆಷ್ಟು ನತದೃಷ್ಟ, ನನ್ನ ಕುಟುಂಬ, ನನ್ನ ಸ್ನೇಹಿತರು, ನನ್ನ ಊರ ಜನ ಎಲ್ಲರೂ ದೂರವಾದರು. ಸದ್ಯಕ್ಕೆ ಆಸರೆಯಾಗಿದ್ದ ಈ ಪುಟ್ಟ ಗುಡಿಸಲು ಕೂಡಾ ಸುಟ್ಟು ಹೋಯಿತಲ್ಲ , ಇನ್ನು ನಾನು ಉಳಿಯಲು ಸಾಧ್ಯವಿಲ್ಲ ಎಂದು, ಗೋಳಾಡ ತೊಡಗಿದ.
ಹಾಗೇ ,ಸ್ವಲ್ಪ ಬೆಳಕು ಹರಿಯುವ ಸಮಯದಲ್ಲಿ, ಸಮುದ್ರದಲ್ಲಿ ಒಂದು ಹಡಗು ಬರುತ್ತಿರುವುದು ಕಾಣಿಸಿತು . ಹಡಗಿನ ಕ್ಯಾಪ್ಟನ್ ಇಳಿದು ಇವನ ಬಳಿಗೆ ಬಂದು, ಇವನನ್ನು ನೋಡಿ, ನೀವು ಇಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿರಿ? ಬಹಳ ದೂರದಿಂದ ಬೆಂಕಿ ಕಾಣಿಸಿತು, ಯಾರೋ ಅಪಾಯದಲ್ಲಿ ಇರಬೇಕೆಂದುಕೊಂಡು ಇಲ್ಲಿಯ ತನಕ ಬಂದೆ ಎಂದು ಹೇಳಿದ.
ಈಗ ಈ ವ್ಯಕ್ತಿಗೆ ಸಂತೋಷದಿಂದ ಮಾತನಾಡಲು ಆಗದೆ, ಕಣ್ಣೀರು ಉಕ್ಕಿ ಬಂದಿತು. ಹಡಗು ಮುಳುಗಿದರೂ ತನ್ನನ್ನು ಬಚಾವು ಮಾಡಿದ್ದಕ್ಕೆ, ಈಗ ಮತ್ತೆ ಅನಿರೀಕ್ಷಿತವಾಗಿ, ತನಗೆ ಸಹಾಯ ಹಸ್ತ ಸಿಕ್ಕಿದ್ದಕ್ಕೆ, ಭಗವಂತನಿಗೆ ಕೃತಜ್ಞತೆಗಳನ್ನು ಅರ್ಪಿಸಿದ.
ನಮ್ಮ ಸಮಸ್ಯೆಗಳು ನಾವಂದುಕೊಂಡ ರೀತಿಯಲ್ಲೇ ಬಗೆಹರಿಯಬೇಕೆಂದೇನಿಲ್ಲ, ಕೆಲವು ಸಲ ಅತ್ಯಂತ ಅನಿರೀಕ್ಷಿತವಾಗಿ, ನಾವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಪವಾಡಗಳು ನಡೆದು ಹೋಗುತ್ತವೆ.
ನಾವು ಬಹಳ ಕಷ್ಟದಲ್ಲಿದ್ದಾಗ ವಿಧಿಯನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪರಿಸ್ಥಿತಿ ಹೇಗೇ ಇರಲಿ, ಸಂಕಷ್ಟದ ಸಂದರ್ಭದಲ್ಲಿ ಧೈರ್ಯ ಬಹಳ ಮುಖ್ಯ. ಹೆದರಿ ವಿಚಲಿತರಾಗದೆ, ಧೈರ್ಯದಿಂದ ,ಆತ್ಮವಿಶ್ವಾಸ ಕಳೆದುಕೊಳ್ಳದೆ, ನಮ್ಮ ಕೆಲಸ ನಾವು ಮಾಡುತ್ತಿರುವುದೇ, ನಮ್ಮನ್ನು ಕಾಪಾಡುವ ದೊಡ್ಡ ಶಕ್ತಿಯಾಗುತ್ತದೆ.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ.